ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮುಂಬರುವ 2026-27ನೇ ಶೈಕ್ಷಣಿಕ ಸಾಲಿನಿಂದ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಈ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಕೊಳ್ಳಲಾಗುವುದು ಎಂದು ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮುಂಬರುವ 2026-27ನೇ ಶೈಕ್ಷಣಿಕ ಸಾಲಿನಿಂದ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಈ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಕೊಳ್ಳಲಾಗುವುದು ಎಂದು ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸಮಾಜ ವಿಜ್ಞಾನ ನಿಕಾಯದ ಸಹಯೋಗದೊಂದಿಗೆ ಮಹಿಳಾ ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಎಲ್ಲ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗಾಗಿ: ಹಕ್ಕುಗಳು, ನ್ಯಾಯ ಮತ್ತು ಕ್ರಮ ಮತ್ತು ಜೆಂಡರ್ ಬಜೆಟ್ ಮತ್ತು ಮಹಿಳಾ ಸಬಲೀಕರಣ ಕುರಿತು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರ ಹೆಸರು ಕೇವಲ ಸಂಘ-ಸಂಸ್ಥೆಗಳಲ್ಲಿ ಮಾತ್ರ ಕಾಣಿಸಬಾರದು, ಅವುಗಳನ್ನು ಸ್ವಯಂ ಕಟ್ಟಿ ಬೆಳೆಸುವ ಸಾಮರ್ಥ್ಯವನ್ನು ಮಹಿಳೆಯರು ಹೊಂದಬೇಕು. ಮಹಿಳೆಯರಲ್ಲಿ ಅಪಾರ ಶಕ್ತಿ ಮತ್ತು ದೃಢ ನಿರ್ಧಾರವಿದ್ದು, ಅದರಿಂದ ಅವರು ಸಮಾಜದ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. ಇದಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಡಾ.ಸೀತವ್ವ ಜೋಡಟ್ಟಿ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಹಿಳೆಯರು ಅರಿವು ಹೊಂದಿ ತಮ್ಮ ಮಕ್ಕಳಿಗೆ ಜ್ಞಾನ ನೀಡಬೇಕು ಎಂದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಕುಂತಲಾ ಶೆಟ್ಟರ ಮಾತನಾಡಿ, ಭಾರತದ ಸಂವಿಧಾನವು ಮಹಿಳೆ-ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದ್ದರೂ ಇನ್ನೂ ಲಿಂಗ ಅಸಮಾನತೆ ಹಾಗೂ ಭೇದಭಾವ ಸಮಸ್ಯೆಗಳು ಉಳಿದಿವೆ. ಸೈಬರ್‌ ಅಪರಾಧ, ಡಿಜಿಟಲ್ ಅಂತರ, ಶಿಕ್ಷಣದ ಕೊರತೆ ಮುಂತಾದ ಸವಾಲುಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಮತ್ತು ಅಧಿಕಾರ ನೀಡಿದರೆ ಅವರು ಸ್ವಾವಲಂಬಿಗಳಾಗಿ ಸಮಾಜದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ ಎಂದರು.ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಪಿ.ಎಸ್.ಕಾಂಬಳೆ ಮಾತನಾಡಿ, ಲಿಂಗ ಸಮಾನತೆ ಸಮಾಜದ ಪ್ರಗತಿಗೆ ಅತ್ಯಂತ ಮುಖ್ಯವಾದ ಅಂಶವಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಹಲವು ಯೋಜನೆಗಳು ಮತ್ತು ಲಿಂಗ ಆಧಾರಿತ ಬಜೆಟ್‌ಗಳನ್ನು ಪರಿಚಯಿಸಿದೆ. ಆದರೆ, ಅವುಗಳ ಪರಿಣಾಮಕಾರಿ ಅನುಷ್ಠಾನವೂ ಅತ್ಯಗತ್ಯವಾಗಿದೆ ಎಂದರು. ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಆರ್.ವಿ.ಗಂಗಶೆಟ್ಟಿ, ಡಾ.ಡಿ.ಎಮ್.ಮದರಿ, ಪ್ರೊ.ಎಂ.ಪಿ.ಬಳಿಗಾರ, ಪ್ರೊ.ನಾಗರಾಜ ಎಂ, ಬೋಧಕ, ಬೋಧಕೇತರ ಸಿಬ್ಬಂದಿ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಪತ್ರ‍್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಸಂವಿಧಾನ ಪ್ರಸ್ತಾವನೆ ಓದಿಸಿದರು. ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಗೂ ಹೋರಾಟ ಗೀತೆ ಹಾಡಿದರು. ಪ್ರೊ.ಜಿ.ಬಿ.ಸೋನಾರ ಸ್ವಾಗತಿಸಿದರು. ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ.ಲಕ್ಷ್ಮೀದೇವಿ.ವೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಸಂದೀಪ ಹಾಗೂ ಡಾ.ಕೆ.ಪಿ.ಸುರೇಶ ಅತಿಥಿಯರನ್ನು ಪರಿಚಯಿಸಿದರು. ಡಾ.ಕಲಾವತಿ ಕಾಂಬಳೆ ವಂದಿಸಿದರು, ಡಾ.ಭಾಗ್ಯಶ್ರೀ ದೊಡಮನಿ ನಿರೂಪಿಸಿದರು.