ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕೆಪಿಎಸ್ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕೆಪಿಎಸ್ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ತಾಲೂಕಿನ ಹಿರೇಕಲಗೋಡು ಹಾಗೂ ಅಂಕರವಳ್ಳಿ ಭಾಗದಲ್ಲಿ ₹೨.೫೦ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ೧,೨೦೦ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ೧,೦೦೦ ಶಾಲೆಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ರಾಜ್ಯದಲ್ಲಿ ಕೆಪಿಎಸ್ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದ ವಿವಿಧೆಡೆ ಕೆಪಿಎಸ್ ಶಾಲೆಗಳಿಗೆ ಉತ್ತಮ ಸ್ಪಂದನೆ ದೊರೆತಿದ್ದು, ಹೆಚ್ಚುವರಿ ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಉದ್ದೇಶದಿಂದ ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಪ್ರತಿ ಕೆಪಿಎಸ್ ಶಾಲೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ₹ ೩ ಕೋಟಿಯಿಂದ ₹೭ ಕೋಟಿ ವರೆಗೆ ವೆಚ್ಚ ಮಾಡಲಾಗುವುದು. ಪಠ್ಯ ಶಿಕ್ಷಣದ ಜೊತೆಗೆ ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಿರುವ ಶಿಕ್ಷಕರನ್ನು ನೇಮಕ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಗಳಿಗೆ ಉಚಿತ ಬಸ್ ಸಂಪರ್ಕ ವ್ಯವಸ್ಥೆಯನ್ನೂ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸೊರಬ ತಾಲೂಕಿಗೆ ಏಳು ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಶೀಘ್ರದಲ್ಲೇ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರ ನನಗೆ ನೀಡಿದ ಜವಾಬ್ದಾರಿಯುತ ಹುದ್ದೆಯನ್ನು ತೃಪ್ತಿಯಿಂದ ನಿರ್ವಹಿಸುತ್ತಿದ್ದೇನೆ. ರಾಜ್ಯದಲ್ಲಿ ೧.೧೬ ಲಕ್ಷ ವಿದ್ಯಾರ್ಥಿಗಳಿದ್ದು, ೨.೫೦ ಲಕ್ಷ ಶಿಕ್ಷಕರಿದ್ದಾರೆ. ಈಗಾಗಲೇ ೧೩ ಸಾವಿರ ಶಿಕ್ಷಕರ ನೇಮಕಾತಿ ನಡೆದಿದ್ದು, ಇನ್ನೂ ೧೭ ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದ್ದು, ಉಚಿತ ನೋಟ್‌ಬುಕ್ ವಿತರಣೆ, ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಉಚಿತ ಮೊಟ್ಟೆ ನೀಡುವಂತಹ ಯೋಜನೆ ಜಾರಿಗೊಳಿಸಲಾಗಿದೆ. ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದ್ದು, ತಾಲೂಕಿನ ಹದಗೆಟ್ಟ ರಸ್ತೆಗಳನ್ನು ಶೀಘ್ರ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ತಾ.ಪಂ. ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಜಿ.ಪಂ. ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಹಾಗೂ ಸದಾನಂದ ಗೌಡ, ಕೆ.ವಿ. ಗೌಡ, ತಾ.ಪಂ. ಮಾಜಿ ಸದಸ್ಯ ಸುನೀಲ್ ಗೌಡ, ತಹಸೀಲ್ದಾರ್ ಕೆ. ಪುರಂದರ್, ತಾ.ಪಂ. ಇಒ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ, ಬೂತ್ ಅಧ್ಯಕ್ಷ ಯುವರಾಜ್, ಟಿ. ಶಿವಾನಂದ, ಶಂಕರ್ ನಾಯ್ಕ, ದಯಾನಂದ ಗೌಡ, ನಾಗರಾಜ ಚಂದ್ರಗುತ್ತಿ, ನಾಗರಾಜ ಚಿಕ್ಕಸವಿ, ಪ್ರಭು , ಭಾಷಾ ಸಾಬ್, ಬಸಪ್ಪ ಅಂಕರವಳ್ಳಿ, ಕೇಶವಣ್ಣ, ರವಿಕುಮಾರ್, ಗಿರಿಗೌಡ, ರೇಖಾ ಸೇರಿದಂತೆ ಹಲವರಿದ್ದರು.