ದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳು ಸೀಳು ತುಟಿಯಿಂದ ಜನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಶಸ್ತ್ರ‌ಚಿಕಿತ್ಸೆ ಮೂಲಕ ಎಷ್ಟೋ ಬಡ ಕುಟುಂಬಗಳಲ್ಲಿ ನಗು ತರುಲಾಗುತ್ತಿದೆ. ಈ ದೈವಿಕ ಕಾರ್ಯದಲ್ಲಿ ರೋಟೋಪ್ಲಾಸ್ಟ್ ರೋಟರಿ ಇಂಟರ್ ನ್ಯಾಷನಲ್ ನಮ್ಮ ಆಸ್ಪತ್ರೆ ಜೊತೆಗೂಡಿ ನಿಸ್ವಾರ್ಥ ಸೇವೆ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹುಟ್ಟಿನಿಂದಲೇ ಸೀಳು ‌ತುಟಿ, ದದ್ದು ಗಲ್ಲ ಹೊಂದಿರುವ ಮಕ್ಕಳ ಮೊಗದಲ್ಲಿ ನಗುವಿನ ಹೊನಲು ಮೂಡಿಸಲು ಉಚಿತ ಸೀಳು‌ತುಟಿ ಮತ್ತು‌ ವಸಡು ಜೋಡಣಾ ಶಿಬಿರ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಮತ್ತು‌ ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರು ಉತ್ತರ ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉಚಿತ ಸೀಳು ತುಟಿ ಮತ್ತು ವಸಡು ಜೋಡಣಾ ಶಿಬಿರ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ‌ಮಾತನಾಡಿದರು.

ದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳು ಸೀಳು ತುಟಿಯಿಂದ ಜನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಶಸ್ತ್ರ‌ಚಿಕಿತ್ಸೆ ಮೂಲಕ ಎಷ್ಟೋ ಬಡ ಕುಟುಂಬಗಳಲ್ಲಿ ನಗು ತರುಲಾಗುತ್ತಿದೆ. ಈ ದೈವಿಕ ಕಾರ್ಯದಲ್ಲಿ ರೋಟೋಪ್ಲಾಸ್ಟ್ ರೋಟರಿ ಇಂಟರ್ ನ್ಯಾಷನಲ್ ನಮ್ಮ ಆಸ್ಪತ್ರೆ ಜೊತೆಗೂಡಿ ನಿಸ್ವಾರ್ಥ ಸೇವೆ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಸದಾಶಯ‌ ವ್ಯಕ್ತಪಡಿಸಿದರು.

ಆಂಧ್ರ ಪ್ರದೇಶದ ಸಾರಿಗೆ ಮತ್ತು ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಮಾತನಾಡಿ, ಶ್ರೀಮಠವು ಸಾರ್ವಜನಿಕ ಕ್ಷೇತ್ರದಲ್ಲಿ ಕಡುಬಡವರ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿನೂತನ ಹಾಗೂ ವಿಭಿನ್ನ ರೀತಿಯ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿರುವ ಆದಿಚುಂಚನಗಿರಿ ಮಠದ ಆಶಯ ಅನನ್ಯವಾದದ್ದು, ಸೇವೆ ವಿಸ್ತಾರವಾಗಲಿ ಎಂದರು.

ಜಿಪಂ ಸಿಇಒ ಡಾ.ಕೆ.ಆರ್.ನಂದಿನಿ ಮಾತನಾಡಿ, ಉಚಿತ ಸೇವೆ ಮೂಲಕ ಮಕ್ಕಳ ತಾಯಿಯರ ಮತ್ತು ಕುಟುಂಬದಲ್ಲಿ ನಗು ತರಿಸುವುದು ಹೆಮ್ಮೆಯ ವಿಷಯ. ಶ್ರೀಮಠದ ಸಾರ್ವಜನಿಕ ಹಿತಾಸಕ್ತಿ ಸೇವೆ ಅಪಾರ ಎಂದು ಸಂತಸ ವ್ಯಕ್ತಪಡಿಸಿದರು.

ರೋಟೋ ಪ್ಲಾಸ್ಟ್ ಇಂಟರ್‌ನ್ಯಾಷನಲ್ ಯುಎಸ್ಎ ಮಿಷನ್ ಡೈರೆಕ್ಟರ್ ಥಾಮಸ್ ಕೆನ್ನೆತ್ ಫಾಕ್ಸ್ ಮಾತನಾಡಿ, ಶ್ರೀ ಮಠದ ಆಸ್ಪತ್ರೆ ಜೊತೆಗೂಡಿ ಹಳ್ಳಿಯ ಬಡ ಜನರ ಸೇವೆಯು ನಮ್ಮಿಂದ ಸಮಾಜಕ್ಕೆ ಆಗುತ್ತಿರುವ ಒಂದು ಒಳ್ಳೆಯ ಕಾರ್ಯ. ಇದು ಹೀಗೆ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು.

ಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ ಮಾತನಾಡಿ, ಶಿಬಿರದಡಿ ಸೀಳು ತುಟಿ ಮತ್ತು ಸುಟ್ಟ ಗಾಯದ ಗುರುತು, ಜನ್ಮವೈಕಲ್ಯ ವಿರೂಪ, ಪುನರ್ ನಿರ್ಮಾಣ, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ವೇಳೆ ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಬಿ.ಸಿ.ಭಗವಾನ್, ರೋಟೋಪ್ಲಾಸ್ಟ್ ಮೆಡಿಕಲ್ ಡೈರೆಕ್ಟರ್, ಡಾ.ಗ್ರೆ ಡೇವಿಡ್ ಸಲೋಮೊ, ಬೆಂಗಳೂರು ರೋಟೋಪ್ಲಾಸ್ಟ್ ಪಿಡಿಜಿ ಡಾ.ಎಸ್.ನಾಗೇಂದ್ರ, ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಜಿ.ಶಿವರಾಮು, ಆಸ್ಪತ್ರೆ ಸಿಒಎಚ್ ಡಾ.ಕೆ.ಎಂ.ಶಿವಕುಮಾರ್ ಸೇರಿದಂತೆ ಹಲವರು ‌ಇದ್ದರು.