ಆದಿಚುಂಚನಗಿರಿ ಆಸ್ಪತ್ರೆ 11 ಬಗೆಯ ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭಿಸಿದೆ. ಪ್ರಸ್ತುತ ಈವರೆಗೂ 30 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ. ಪ್ರತಿ ತಿಂಗಳು 200ಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ.

ಕನ್ನಡಪ್ರಭವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಡಿ.1ರಿಂದ 12ರವರೆಗೆ ಉಚಿತ ಸೀಳು ತುಟಿ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರು ಉತ್ತರದ ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ಕಳೆದ 11 ವರ್ಷಗಳಿಂದ ಸೀಳು ತುಟಿ ಮತ್ತು ವಸಡು ಜೋಡಣಾ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಅಮೇರಿಕಾದ ರೋಟಾಪ್ಲಾಸ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯ 30 ಮಂದಿ ನುರಿತ ತಜ್ಞರು ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ, ವೈದ್ಯರ ಸೇವೆ, ಔಷಧಿ, ದಾದಿಯರ ಸೇವೆ, ವಾರ್ಡ್‌ಗಳ ವ್ಯವಸ್ಥೆ ಊಟ ಸೇರಿದಂತೆ ಉಚಿತ ಸೇವೆ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಡಿ.1ರ ಸಂಜೆ 4 ಗಂಟೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಸಮಾರಂಭದ ಸಾನಿಧ್ಯವಹಿಸಿ ಶಿಬಿರ ಉದ್ಘಾಟಿಸುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಬೆಂಗಳೂರಿನ ರಾಜಿವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಸಿ.ಭಗವಾನ್, ಜಿಪಂ ಸಿಇಒ ಕೆ.ಆರ್.ನಂದಿನಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಟ್ರಸ್ಟಿ ಡಿ.ದೇವರಾಜು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಆದಿಚುಂಚನಗಿರಿ ಆಸ್ಪತ್ರೆ ಉಪ ಪ್ರಾಂಶುಪಾಲ ಡಾ.ಕೆ.ಎಸ್.ರವಿ ಮಾತನಾಡಿ, ಆದಿಚುಂಚನಗಿರಿ ಆಸ್ಪತ್ರೆ 11 ಬಗೆಯ ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭಿಸಿದೆ. ಪ್ರಸ್ತುತ ಈವರೆಗೂ 30 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ. ಪ್ರತಿ ತಿಂಗಳು 200ಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ ಎಂದರು.

ನರ ಶಸ್ತ್ರ ಚಿಕಿತ್ಸಾ, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ, ಕ್ಯಾನ್ಸರ್ ರೋಗ ವಿಭಾಗ ಹಾಗೂ ಇನ್ನಿತರ ರೀತಿಯ ಸೂಪರ್ ಸ್ಪೆಷಾಲಿಟಿ ವಿಭಾಗಗಳಿಂದ ನಗರ ಪ್ರದೇಶ ಆಸ್ಪತ್ರೆಗಳ ವೆಚ್ಚಕ್ಕಿಂತ ಅತೀ ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದ ರೋಗಿಗಳಿಗೆ ಅನುಕೂಲವಾಗುವಂತೆ ಸೇವೆ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಈ ಸೇವೆಗಳ ಸದ್ಬಳಕೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಎಸಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೇಯಸ್ ಕೃಷ್ಣನ್, ಐಕ್ಯೂಎಸಿ ಸಂಯೋಜಕ ಡಾ.ಎಂ.ರವಿಕುಮಾರ್, ಆಸ್ಪತ್ರೆ ಆರೋಗ್ಯ ನಿರೀಕ್ಷಕ ವಿನಯ್ ಕುಮಾರ್ ಇದ್ದರು.