ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಡಗೂರು ಅಡವಿ ಮಠ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದು ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀಮದ್ದಾನೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಮಹಾಮನೆ (ಉಚಿತ ಶಿಕ್ಷಣ ಯೋಜನೆ) ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪೋಷಕರ ಹಾಗೂ ದಾನಿಗಳ ''''ಸಂಗಮ'''' ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀ ಮಠವು ಶೈಕ್ಷಣಿಕ ಕ್ಷೇತ್ರದಲ್ಲಿ ತಾಲೂಕಿನ ವ್ಯಾಪ್ತಿಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕಳೆದ 2006 ರಲ್ಲಿ ಮಹಾಮನೆ ಉಚಿತ ಶಿಕ್ಷಣ ಪ್ರಾರಂಭಿಸಲಾಯಿತು ಎಂದರು. ಮಹಾಮನೆ ಉಚಿತ ಶಿಕ್ಷಣದ ಆರಂಭದಲ್ಲಿ ಕೇವಲ 30 ವಿದ್ಯಾರ್ಥಿಗಳಿದ್ದರು. ಇದೀಗ ಮಹಾಮನೆಯಲ್ಲಿ ಪ್ರಸ್ತುತ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಾಧನೆಗೈಯಬೇಕಾದರೆ ತಂದೆ-ತಾಯಿ ಜೊತೆಗೆ ಶಿಕ್ಷಕರ ಪಾತ್ರವೂ ಕೂಡ ದೊಡ್ಡದು. ಮಕ್ಕಳೊಡನೆ ಬೆರೆಯುವ ಕೆಲಸವಾಗಬೇಕು. ಚಿಕ್ಕಂದಿನಿಂದಲೇ ಆತ್ಮಸ್ಥೈರ್ಯ ಸಕಾರಾತ್ಮಕ ಚಿಂತನೆ,ಪ್ರೇರಣೆ ನಿರ್ದಿಷ್ಟ ಗುರಿ ಇರಬೇಕು ಎಂದರು.ಮಹಾಮನೆಯಲ್ಲಿ ವಿದ್ಯಾಭ್ಯಾಸ ಕಲಿಯುತ್ತಿರುವ ವಿದ್ಯಾರ್ಥಿಗಳು 5ನೇ ತರಗತಿಯಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ತಾಲೂಕಿನ ಕೆಲ ದಾನಿಗಳ ಸಹಾಯ ಪಡೆದು ನಡೆಸಲಾಗುತ್ತಿದೆ ಎಂದರು. ಉಚಿತ ಶಿಕ್ಷಣ ಯೋಜನೆಗೆ 300ಕ್ಕೂ ಹೆಚ್ಚು ದಾನಿಗಳು ಕೈಜೋಡಿಸಿರುವುದು ಸಂತಸದ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಗ್ನಿವೀರ್ ಸೈನಿಕರಾಗಿ ಆಯ್ಕೆಯಾದ ತಾಲೂಕಿನ ದೇಪಾಪುರ ಗ್ರಾಮದ ಡಿ.ಸಿ.ಮೌಲ್ಯರನ್ನು ಶ್ರೀಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಸ್ವಾಮಿ, ಮುಖ್ಯ ಶಿಕ್ಷಕ ಎಂ.ಪ್ರಕಾಶ್, ಪ್ರಾಂಶುಪಾಲ ನಟರಾಜು, ಪೋಷಕ ಹೂರದಹಳ್ಳಿ ಪ್ರಸಾದ್, ಸಂಸ್ಥೆಯ ಶಿಕ್ಷಕ ವರ್ಗ ಹಾಗೂ ಮಹಾಮನೆ ದಾನಿಗಳು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗಿರಲಿ ಗುರಿ, ಛಲಶೈಕ್ಷಣಿಕ ಕ್ಷೇತ್ರದಲ್ಲಿ ಮಠಮಾನ್ಯಗಳ ಪಾತ್ರ ಅಪಾರ ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ. ವಿವೇಕಾನಂದ ಹೇಳಿದರು. ಸಮಾರಂಭದಲ್ಲಿ ಮಾತನಾಡಿ ಉಚಿತ ಶಿಕ್ಷಣ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯ ಅತ್ಯಂತ ಶ್ಲಾಘನೀಯ. ವಿದ್ಯಾರ್ಥಿಗಳು ಸಹ ಈ ಯೋಜನೆಯ ಲಾಭ ಪಡೆಯಿರಿ ಎಂದರು. ಜೀವನದಲ್ಲಿ ಏನಾದರೂ ಸಾಧಿಸುವಂತಹ ಕೆಲಸ ಆಗಬೇಕು. ಅದಕ್ಕೆ ಗುರಿ ಮತ್ತು ಛಲ ಹೊಂದಬೇಕು. ತಾನು ಓದಿದ ಶಾಲೆ ಹಾಗೂ ಆಶ್ರಯ ನೀಡಿದವರಿಗೆ ಗೌರವ ಬರುವಂತೆ ಗುರಿ ಮುಟ್ಟಿ ಎಂದರು.
ಗುರಿ ಸಾಧಿಸೋವರೆಗೆ ಇಟ್ಟ ಹೆಜ್ಜೆ ತೆಗೆದಿರಿವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಶಿಸ್ತು ಹಾಗೂ ಶ್ರದ್ಧೆಯಿರಬೇಕು ಎಂದು ಸಾಹಿತಿ ಹಾಗೂ ನಿವೃತ್ತ ಡಿಎಸ್‌ಪಿ ಎಚ್.ಎಲ್. ಶಿವಬಸಪ್ಪ ಹೊರೆಯಾಲ ಸಲಹೆ ನೀಡಿದರು. ಮುಖ್ಯ ಭಾಷಣದಲ್ಲಿ ಮಾತನಾಡಿ, ಮಕ್ಕಳು ದೇಶದ ಭವ್ಯ ಪ್ರಜೆಗಳಾಗಬೇಕು ಎಂದಾದರೆ ಕಷ್ಟ ಪಟ್ಟು ಇಚ್ಛೆಯಿಂದ ಓದಬೇಕು ಮತ್ತು ಬರೆಯಬೇಕು. ಆ ನಿಟ್ಟಿಯಲ್ಲಿ ಮಗ್ನರಾಗಿ ಎಂದರು. ಮಕ್ಕಳು ಮೊಬೈಲ್ ಗೀಳಿಗೆ ಬೀಳಬೇಡಿ. ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಗುರು, ಹಿರಿಯರಿಗೆ ಗೌರವ ಕೊಡಬೇಕು. ನಿಮ್ಮ ಗುರಿ ಸಾಧಿಸುವ ತನಕ ಇಟ್ಟ ಹೆಜ್ಜೆ ತೆಗೆಯಬೇಡಿ ಎಂದರು.