ಸಾರಾಂಶ
ಮತದಾನ ಪ್ರಮಾಣ ಹೆಚ್ಚಾಗಲಿ, ಅದರಲ್ಲೂ ಹೆಚ್ಚು ಹೆಚ್ಚು ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳಲಿ ಎನ್ನುವ ಕಾರಣಕ್ಕೆ ಉಚಿತ ಐ ಬ್ರೊ ಮಾಡುವುದಾಗಿ ಘೋಷಿಸಿದ್ದಾರೆ.
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಮತದಾನ ಮಾಡಿದ ಮಹಿಳೆಯರೇ, ಇಲ್ಲಿ ನಿಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿದರೆ ಸಾಕು ನಿಮಗೆ ಉಚಿತ ಐ ಬ್ರೋ (ಕಣ್ಣಿನ ಹುಬ್ಬು ಅಲಂಕಾರ) ಭಾಗ್ಯ ಲಭಿಸಲಿದೆ!ಹೌದು! ಇಲ್ಲಿಯ ಮಠದ ಕೇರಿಯ ರಾಘವೇಂದ್ರ ಮಠದ ಬಳಿ ಇರುವ ಕನ್ನಡತಿ ನ್ಯಾಚುರಲ್ ಬ್ಯೂಟಿ ಪಾರ್ಲರ್ ಮಾಲಕರು ಮೇ 7 ರಂದು ನಡೆಯುವ ಲೋಕಸಭೆ ಮತದಾನ ವೇಳೆ ಮತ ಚಲಾಯಿಸಿ ಬಂದ ಮಹಿಳೆಯರಿಗೆ ಇಂತಹ ಒಂದು ಆಫರ್ ನೀಡಿದ್ದಾರೆ.
ಮತದಾನ ಪ್ರಮಾಣ ಹೆಚ್ಚಾಗಲಿ, ಅದರಲ್ಲೂ ಹೆಚ್ಚು ಹೆಚ್ಚು ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳಲಿ ಎನ್ನುವ ಕಾರಣಕ್ಕೆ ಉಚಿತ ಐ ಬ್ರೊ ಮಾಡುವುದಾಗಿ ಘೋಷಿಸಿದ್ದಾರೆ.ಮೇ 7ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ನಿರಂತರವಾಗಿ ನಡೆಯುತ್ತದೆ. ಈ ಸಮಯದಲ್ಲಿ ಮತದಾನ ಮಾಡಿದ ಎಷ್ಟೇ ಮಹಿಳೆಯರು ತಮ್ಮ ಪಾರ್ಲರ್‌ಗೆ ಆಗಮಿಸಿದರೂ ಯಾವುದೇ ಹಣ ಪಡೆಯದೇ ಉಚಿತ ಐ ಬ್ರೊ ಮಾಡಲಾಗುವುದು ಎಂದು ಹೇಳುತ್ತಾರೆ ಬ್ಯೂಟಿಷಿಯನ್ ಕೆ.ಎಂ. ಲತಾ.
ಉಚಿತ ರಾಖಿ ವಿತರಣೆ:ಈ ಹಿಂದೆ ಇವರು ಲೇಡೀಸ್ ಟೈಲರಿಂಗ್ ಶಾಪ್ ನಡೆಸುತ್ತಿದ್ದರು. ಆಗಲೂ ರಾಖಿ ಹಬ್ಬದಲ್ಲಿ ಸತತ ಎಂಟು ವರ್ಷ ಮಹಿಳೆಯರಿಗೆ ಉಚಿತವಾಗಿ ರಾಖಿಗಳನ್ನು ವಿತರಿಸಿ ಸಹೋದರರ ಭ್ರಾತೃತ್ವದ ಬಗ್ಗೆ ಸಂದೇಶ ನೀಡಿದ್ದರು. ಈಗ್ಗೆ 6 ತಿಂಗಳ ಹಿಂದೆ ಇವರು ಈ ಬ್ಯೂಟಿ ಪಾರ್ಲರ್ ಆರಂಭಿಸಿದ್ದಾರೆ.
ಮತದಾನದ ಉತ್ತೇಜನಕ್ಕಾಗಿ, ಸಾಮಾಜಿಕ ಕಳಕಳಿಗಾಗಿ ನಮ್ಮ ಉಚಿತ ಐ ಬ್ರೊ ಮಾಡಲಿದ್ದೇವೆ. ಮಹಿಳೆಯರು ತಪ್ಪದೇ ಮತ ಚಲಾಯಿಸಿ, ಈ ಸೌಲಭ್ಯ ಪಡೆದುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿಷಿಯನ್ ಕೆ.ಎಂ.ಲತಾ.