ಭಾರತೀಯ ಸನಾತನ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಜೀವನಮೌಲ್ಯಗಳು ಜಗತ್ತಿನಾದ್ಯಂತ ಅದೆಷ್ಟೋ ಜನರನ್ನು ಆಕರ್ಷಿಸುತ್ತಿವೆ. ಇದಕ್ಕೆ ಮತ್ತೊಂದು ಜೀವಂತ ನಿದರ್ಶನ ಸ್ವೀಡನ್ ದೇಶದ ಈ ಮಹಿಳೆ, ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಬೇರುಗಳನ್ನು ಹುಡುಕಿಕೊಂಡು ಇವರು ಕುಂದಾಪುರಕ್ಕೆ ಬಂದಿದ್ದಾರೆ. ಹಿಂದೂ ಧರ್ಮ ಅವರನ್ನು ಎಷ್ಟುಆಕರ್ಷಿಸಿದೆ ಎಂದರೇ ಅವರು ತಮ್ಮ ಹೆಸರನ್ನು ಗೌರಿ ಎಂದು ಬದಲಾಯಿಸಿಕೊಂಡಿದ್ದಾರೆ.
ಕುಂದಾಪುರ : ಭಾರತೀಯ ಸನಾತನ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಜೀವನಮೌಲ್ಯಗಳು ಜಗತ್ತಿನಾದ್ಯಂತ ಅದೆಷ್ಟೋ ಜನರನ್ನು ಆಕರ್ಷಿಸುತ್ತಿವೆ. ಇದಕ್ಕೆ ಮತ್ತೊಂದು ಜೀವಂತ ನಿದರ್ಶನ ಸ್ವೀಡನ್ ದೇಶದ ಈ ಮಹಿಳೆ, ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಬೇರುಗಳನ್ನು ಹುಡುಕಿಕೊಂಡು ಇವರು ಕುಂದಾಪುರಕ್ಕೆ ಬಂದಿದ್ದಾರೆ. ಹಿಂದೂ ಧರ್ಮ ಅವರನ್ನು ಎಷ್ಟುಆಕರ್ಷಿಸಿದೆ ಎಂದರೇ ಅವರು ತಮ್ಮ ಹೆಸರನ್ನು ಗೌರಿ ಎಂದು ಬದಲಾಯಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಹಿಂದೂ ಧರ್ಮ, ಪರಂಪರೆಯ ಬಗ್ಗೆ ಆಸಕ್ತಿ ಹೊಂದಿದ್ದ ಗೌರಿ, ಇದೀಗ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪ್ರಕೃತಿ ಪ್ರೇಮ, ಗೋಸಂರಕ್ಷಣೆ ಹಾಗೂ ಯೋಗ -ಧ್ಯಾನಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ.ಸದ್ಯ ಸ್ಪೇನ್‌ನಲ್ಲಿ ವಾಸವಾಗಿರುವ ಅವರು, ಆಗಾಗ್ಗೆ ಭಾರತಕ್ಕೆ ಅದರಲ್ಲೂ ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಭೇಟಿ ನೀಡುತಿದ್ದಾರೆ. ಇಲ್ಲಿನ ಹಸಿರು ಪರಿಸರದಲ್ಲಿ ಯೋಗ, ಧ್ಯಾನ ಜೊತೆಗೆ, ಗೋಶಾಲೆಯ ಗೋವುಗಳೊಂದಿಗೆ ಕಾಲ ಕಳೆಯುವುದು ಅವರ ನೆಚ್ಚಿನ ದಿನಚರಿಯಾಗಿದೆ.ನಾನು ಗುರುಗಳಾದ ಸ್ವಾಮಿ ಈಶಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ, ಸದ್ಯ ನಾನು ಅದ್ವೈತ ಮತದ ಗಂಭೀರ ಅಧ್ಯಯನ ನಡೆಸುತ್ತಿದ್ದೇನೆ. ನನಗೆ ಚಿತ್ರಕೂಟದ ವಾತಾವರಣ, ಇಲ್ಲಿನ ಸಿಬ್ಬಂದಿಯ ಆಪ್ತತೆ ಮತ್ತು ಹಳ್ಳಿ ಪರಿಸರ ಅತ್ಯಂತ ಪ್ರಿಯವಾಗಿದೆ. ಇಲ್ಲಿನ ಗೋವುಗಳ ಒಡನಾಟ ನನಗೆ ಅಪಾರ ಮಾನಸಿಕ ನೆಮ್ಮದಿ ನೀಡುತ್ತದೆ. ಇಲ್ಲಿ ವ್ಯಕ್ತಿಯ ದೇಹ ಪ್ರಕೃತಿಗೆ ತಕ್ಕಂತೆ ಸೂಕ್ತ ಆಯುರ್ವೇದ ಆರೈಕೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕುಂದಾಪುರದ ಭೇಟಿಯ ನಂತರ ಅವರು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಪ್ರಸಿದ್ಧ ರಮಣ ಮಹರ್ಷಿ ಆಶ್ರಮಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.
ಗೌರಿಯವರ ಶ್ರದ್ಧೆಯ ಕುರಿತು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರು ಹಾಗೂ ಪ್ರಧಾನ ವೈದ್ಯರಾದ ಡಾ. ರಾಜೇಶ್ ಬಾಯರಿ, ಗೌರಿಯವರು ಭಾರತೀಯ ಸನಾತನ ಸಂಸ್ಕೃತಿಯನ್ನು ಅತ್ಯಂತ ನಿಷ್ಠೆಯಿಂದ ಪ್ರೀತಿಸುತ್ತಾರೆ. ಅವರು ಇಲ್ಲಿರುವಾಗ ಸದಾ ಓಂ ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರುತ್ತಾರೆ. ಅವರ ಈ ಧರ್ಮನಿಷ್ಠೆ ಮತ್ತು ಭಕ್ತಿಭಾವ ನಿಜಕ್ಕೂ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡುತ್ತದೆ” ಎಂದಿದ್ದಾರೆ.ನಮ್ಮವರೇ ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನುಬಿದ್ದು ತಮ್ಮ ಸಂಪ್ರದಾಯಗಳಿಂದ ದೂರ ಸರಿಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸಪ್ತಸಾಗರದಾಚೆಯಿಂದ ಬಂದ ವಿದೇಶಿ ಮಹಿಳೆಯೊಬ್ಬರು ಭಾರತದ ಮಣ್ಣಿನ ಸಂಸ್ಕೃತಿ, ಗೋಸೇವೆ ಮತ್ತು ಹಿಂದೂ ತತ್ತ್ವಶಾಸ್ತ್ರವನ್ನು ಇಷ್ಟೊಂದು ಗಾಢವಾಗಿ ಅಪ್ಪಿಕೊಂಡಿರುವುದು ನಮಗೇ ಮಾದರಿಯಾಗಿದೆ.