ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕು ಹೊಳಲು ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹೊಳಲು ಆರೋಗ್ಯ ಕೇಂದ್ರ ಮತ್ತು ಆಶಾಕಿರಣ ಕಾರ್ಯಕ್ರಮದಡಿ ನೇತ್ರ ತಪಾಸಣಾ ಶಿಬಿರ ಜರುಗಿತು.ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ.ರವಿಕುಮಾರ್, ಪ್ರತಿಯೊಬ್ಬರೂ ಶಿಬಿರದ ಸದುಪಯೋಗ ಪಡೆಯಬೇಕು. ಅಕ್ಕಪಕ್ಕದ ಗ್ರಾಮಸ್ಥರು ನೇತ್ರ ತಪಾಸಣೆ ಮಾಡಿಸಿಕೊಂಡು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ದೃಷ್ಟಿದೋಷ ಇರುವವರು ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಪ್ರತಿಯೊಬ್ಬರೂ ‘ನೇತ್ರದಾನ ಮಹಾದಾನ’ವೆಂದು ತಿಳಿದು ನೇತ್ರದಾನ ಮಾಡುವುದರ ಮುಖಾಂತರ ಇನ್ನೊಬ್ಬರ ಬದುಕಿಗೆ ಆಶಾಕಿರಣವಾಗುವಂತೆ ಸಲಹೆ ನೀಡಿದರು.ನೇತ್ರಾಧಿಕಾರಿ ಡಾ.ಪವನ್ ಸಿಂಗ್ ಮಾತನಾಡಿ, ಪ್ರತಿಯೊಬ್ಬರ ಕಣ್ಣಿನ ದೃಷ್ಟಿಯಯನ್ನು ಉತ್ತಮಪಡಿಸುವ ಸಲುವಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರ ದೃಷ್ಟಿ ಚೆನ್ನಾಗಿದ್ದರೆ ಅವರ ಜೀವನ ಸುಖಕರವಾಗಿರುತ್ತದೆ. ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಎರಡು ದಿನಗಳು ನೇತ್ರ ತಪಾಸಣೆ ಮಾಡಲಾಗುತ್ತದೆ. ಹೆಚ್ಚಿನ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದರು.
ಶಿಬಿರದಲ್ಲಿ ಡಾ.ದುರ್ಗಾಂಬ, ಆರೋಗ್ಯ ಸುರಕ್ಷಾಧಿಕಾರಿ ಎಂ.ಗೀತಾ, ಸಮುದಾಯ ಆರೋಗ್ಯ ಅಧಿಕಾರಿ ಡಾ.ಚೈತ್ರಾ, ಡಾ.ರುಕ್ಮಿಣಿ ಶುಶ್ರೂಷಕರಾದ ರೇಷ್ಮಾ, ಮಹೇಶ್, ಇತರಿದ್ದರು.ನಾಳೆ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಮಂಡ್ಯ:ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಅ.17 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಸಮಾಜ ಕಲ್ಯಾಣ ಇಲಾಖೆ ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಅಂಗವಾಗಿ ಬೆಳಗ್ಗೆ 9.30 ಗಂಟೆಗೆ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಜಿಲ್ಲಾ ಪಂಚಾಯತ್ ಕಚೇರಿಯವರೆಗೆ ವಾಲ್ಮೀಕಿ ಅವರ ಭಾವಚಿತ್ರ, ಕಲಾತಂಡಗಳ ಮೆರವಣಿಗೆ ನಡೆಯಲಿದೆ. ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಂಸದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಎಇಟಿ ಮಹಾ ಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಚ್.ಪಿ ಧರ್ಮೇಶ್ ಆಗಮಿಸಲಿದ್ದಾರೆ.