ಮಧ್ಯಪ್ರಾಚ್ಯ ಯುದ್ದದ ಕಾರಣದಿಂದ ಎಲ್‌ಪಿಜಿ ಕೊರತೆಯಿಂದಾಗಿ ನಗರದಲ್ಲಿರುವ ಹಲವು ಹೋಟೆಲ್‌, ಪಿಜಿಗಳೆಲ್ಲ ಬಂದಾಗಿವೆ. ಇದರಿಂದ ಜನರ ಊಟ- ತಿಂಡಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಗಮನಿಸಿದ ಇಲ್ಲಿನ ಆದಿತ್ಯರಾಜ್ ದಾಂಡೇಲಿ ಕುಟುಂಬ ನಿತ್ಯ ಸಾವಿರಾರು ಜನರಿಗೆ ಉಚಿತ ಅನ್ನದಾಸೋಹ ನಡೆಸುತ್ತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ದದ ಕಾರಣದಿಂದ ಎಲ್‌ಪಿಜಿ ಕೊರತೆಯಿಂದಾಗಿ ನಗರದಲ್ಲಿರುವ ಹಲವು ಹೋಟೆಲ್‌, ಪಿಜಿಗಳೆಲ್ಲ ಬಂದಾಗಿವೆ. ಇದರಿಂದ ಜನರ ಊಟ- ತಿಂಡಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಗಮನಿಸಿದ ಇಲ್ಲಿನ ಆದಿತ್ಯರಾಜ್ ದಾಂಡೇಲಿ ಕುಟುಂಬ ನಿತ್ಯ ಸಾವಿರಾರು ಜನರಿಗೆ ಉಚಿತ ಅನ್ನದಾಸೋಹ ನಡೆಸುತ್ತಿದೆ.

ಇಲ್ಲಿನ ವಿದ್ಯಾನಗರ ವೃತ್ತದ ಬಳಿಯ ಓಕ್ಸ್‌ ಹೋಟೆಲ್‌ನ ಎದುರಿನ ಕಟ್ಟಡದಲ್ಲಿ ಮಾ. 17ರಿಂದ ಉಚಿತ ಅನ್ನದಾಸೋಹ ಪ್ರಾರಂಭಿಸಿದೆ. ಧಾರವಾಡ ಜಿಲ್ಲೆಯಲ್ಲದೇ ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ಅಕ್ಕಪಕ್ಕದ ಹತ್ತಾರು ಜಿಲ್ಲೆಗಳಿಂದ ವ್ಯಾಪಾರ, ವಹಿವಾಟು, ಶಿಕ್ಷಣ, ಉದ್ಯೋಗಕ್ಕಾಗಿ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಾರೆ. ಇವರೆಲ್ಲರಿಗೂ ಹೆಚ್ಚಾಗಿ ನಗರದಲ್ಲಿರುವ ಹೋಟೆಲ್‌ಗಳೇ ಆಸರೆ. ಆದರೆ, ಕಳೆದ 10-12 ದಿನಗಳಿಂದ ವಾಣಿಜ್ಯ ಬಳಕೆ ಸಿಲಿಂಡರ್‌ ಪೂರೈಕೆ ಬಂದಾದ ಹಿನ್ನೆಲೆಯಲ್ಲಿ ಹಲವೆಡೆ ಸಣ್ಣಪುಟ್ಟ ಹೋಟೆಲ್‌, ಪಿಜಿಗಳು ತಾತ್ಕಾಲಿಕವಾಗಿ ಬಂದ್‌ ಆಗಿವೆ. ಹಣ ನೀಡಿದರೂ ಆಹಾರ ಸಿಗುತ್ತಿಲ್ಲ. ಇದನ್ನು ಗಮನಿಸಿದ ನಗರದ ಆದಿತ್ಯ ರಾಜ್ ದಾಂಡೇಲಿ ಕುಟುಂಬ ಬಡವರು, ನಿರ್ಗತಿಕರು, ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳ ಸಂಬಂಧಿಕರಿಗೆ ಆಹಾರ ಸಮಸ್ಯೆಯಾಗಬಾರದು ಎಂದು ಉಚಿತ ಅನ್ನದಾನ ಮಾಡುತ್ತಿದ್ದಾರೆ.

ಸಾವಿರ ಜನರಿಗೆ ಅನ್ನದಾನಮಂಗಳವಾರದಿಂದ (ಮಾ.17) ಆರಂಭವಾಗಿರುವ ಉಚಿತ ಅನ್ನದಾನ ಮೊದಲ ದಿನದಂದೇ ಸಾವಿರಕ್ಕೂ ಅಧಿಕ ಜನರು ಆಗಮಿಸಿ ಊಟ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿತ್ಯವೂ 2 ಸಾವಿರ ಜನರಿಗೆ ಅನ್ನದಾನ ಮಾಡುವ ಸಂಕಲ್ಪ ಹೊಂದಿರುವ ಈ ತಂಡ ಮಂಗಳವಾರ 1 ಕ್ವಿಂಟಲ್‌ ಅನ್ನ, 800 ಲೀಟರ್ ಸಾಂಬಾರ್, 600 ಲೀಟರ್‌ ಮಜ್ಜಿಗೆ, 40 ಕೆಜಿ ಬದನೆಕಾಯಿ ಪಲ್ಲೆ, ಉಪ್ಪಿನಕಾಯಿ ನೀಡಿದ್ದಾರೆ. ಬುಧವಾರವೂ 1.25 ಕ್ವಿಂಟಲ್‌ ಅನ್ನ, 900 ಲೀಟರ್‌ ಸಾಂಬಾರ್, 600 ಲೀಟರ್‌ ಮಜ್ಜಿಗೆ, 45 ಕೆಜಿ ಬದನೆಕಾಯಿ ಪಲ್ಲೆ ತಯಾರಿಸಿ ಹಸಿದವರಿಗೆ ಉಚಿತವಾಗಿ ಊಟ ಮಾಡಿಸಿದ್ದಾರೆ. ಈ ಅಡುಗೆಯನ್ನು ಸಂಪೂರ್ಣವಾಗಿ ಸೌದೆ ಒಲೆಯಲ್ಲಿ ಮಾಡುತ್ತಿರುವುದು ವಿಶೇಷ.ಮೂರು ಹೊತ್ತು ಅನ್ನದಾನ

ಒಂದು ವಾರಗಳ ಕಾಲ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಈ ಉಚಿತ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ಅಷ್ಟರೊಳಗೆ ಸಿಲಿಂಡರ್‌ ಸಮಸ್ಯೆ ಇತ್ಯರ್ಥವಾಗದಿದ್ದರೆ ಕುಟುಂಬದವರು, ಸ್ನೇಹಿತರೊಂದಿಗೆ ಚರ್ಚಿಸಿ ಮುಂದುವರಿಸುವ ಇಚ್ಛೆ ಹೊಂದಿದ್ದಾರೆ. ಆದಿತ್ಯರಾಜ್‌ ದಾಂಡೇಲಿ ಕುಟುಂಬದವರ ಈ ಕಾರ್ಯಕ್ಕೆ ನಿಖಿಲ್‌ ದಾಂಡೇಲಿ, ಶಕ್ತಿರಾಜ ದಾಂಡೇಲಿ ಸೇರಿದಂತೆ ಹಲವು ಸ್ನೇಹಿತರು ಕೈಜೋಡಿಸಿದ್ದಾರೆ.ಹರ್ಷ

ಎಲ್‌ಪಿಜಿ ಸಿಲಿಂಡರ್‌ ಸ್ಥಗಿತಗೊಳಿಸಿರುವುದರಿಂದ ಎಲ್ಲೆಡೆ ಹೋಟೆಲ್‌, ಪಿಜಿ ಸೆಂಟರ್‌ಗಳು ಬಂದಾಗಿವೆ. ಉದ್ಯೋಗ, ವ್ಯಾಸಂಗ, ಚಿಕಿತ್ಸೆಗಾಗಿ ಆಗಮಿಸುವ ಜನರಿಗೆ, ನಿರ್ಗತಿಕರಿಗೆ ಊಟದ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಈ ಅನ್ನದಾನ ಮಾಡಲಾಗುತ್ತಿದೆ. ಹಲವರು ಇದರ ಸದುಪಯೋಗ ಪಡೆದುಕೊಳ್ಳುತ್ತಿರುವುದು ಹರ್ಷ ತಂದಿದೆ ಎನ್ನುತ್ತಾರೆ ಅನ್ನದಾನ ವ್ಯವಸ್ಥೆ ಮಾಡಿರುವ ಉದ್ಯಮಿ ಆದಿತ್ಯರಾಜ್‌ ದಾಂಡೇಲಿ.