ಸಾರಾಂಶ
ಆಗ್ರಹ । ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮುತ್ತಪ್ಪ । ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಒತ್ತಾಯ । ಅನಿಷ್ಟ ಪದ್ಧತಿ ತಡೆಗೆ ಅಧಿಕಾರಿಗಳು ವಿಫಲ: ಆರೋಪ
ಕನ್ನಡಪ್ರಭ ವಾರ್ತೆ ಚಾಮರಾಜನಗರಸುಪ್ರೀಂ ಕೋರ್ಟ್‌ನಿಂದ ನಿಷೇಧಿಸ್ಪಲ್ಟಟ್ಟಿರುವ ಬಹಿಷ್ಕಾರದಂತಹ ಸಾಮಾಜಿಕ ಅನಿಷ್ಟ ಪದ್ಧತಿಯಿಂದ ಮುಕ್ತಗೊಳಿಸಿ ನಮಗೆ ನ್ಯಾಯ ಒದಗಿಸಿ ಎಂದು ಜಿಲ್ಲಾಡಳಿತವನ್ನು ಪ್ರಜಾ ಪರಿವರ್ತನ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಮುತ್ತಪ್ಪ ಒತ್ತಾಯಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜನಗರ ತಾಲೂಕು ಲಿಂಗರಾಜಪುರದಲ್ಲಿ ಬಹಿಷ್ಕಾರದಂತಹ ಸಾಮಾಜಿಕ ಅನಿಷ್ಟ ಪದ್ಧತಿ ಜೀವಂತವಾಗಿದೆ. ಇದೇ ಗ್ರಾಮದ ಗೋವಿಂದಶೆಟ್ಟಿ ಹಾಗೂ ಎನ್.ಸಿ. ಸಿದ್ದರಾಜು ಕುಟುಂಬ ಇಂತಹ ಅನಿಷ್ಟ ಪದ್ಧತಿಗೆ ಒಳಗಾಗಿದೆ. ದೂರು ನೀಡಿದರೂ ಇಂತಹ ಸಾಮಾಜಿಕ ಪದ್ಧತಿಯನ್ನು ತಡೆಯುವಲ್ಲಿ ಮತ್ತು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರಲ್ಲಿ ಡೀಸಿ ಮತ್ತು ಎಸ್ಪಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಈ ಘಟನೆಯನ್ನು ಸಾರ್ವಜನಿಕ ಹಿತಾಸಕ್ತಿ ಕಾರಣದಿಂದ ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಇಂತಹ ಘಟನೆ ಜರುಗದಂತೆ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಪಷ್ಟ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದರು. ಇನ್ನೊಂದು ವಾರದೊಳಗೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನೊಂದ ಕುಟುಂಬಗಳ ಜೊತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಂತ್ರಸ್ತ ಗೋವಿಂದಶೆಟ್ಟಿ ಮಾತನಾಡಿ, ನಾನು ಉಪ್ಪಾರ ಸಮುದಾಯಕ್ಕೆ ಸೇರಿದ್ದು, ನಮ್ಮ ಸಮುದಾಯದ ಊರಿನ ಹಿರಿಯ ಮುಖಂಡರು ಮನೆಯ ಒತ್ತುವರಿ ವಿಷಯಕ್ಕೆ ೨೦೨೩ರಲ್ಲಿ ನಾನು ಮಾಡಿಕೊಂಡು ಮನೆ ಕಟ್ಟದಿದ್ದರೂ ಪಂಚಾಯಿತಿ ಮಾಡಿ ೫,೦೦೦ ರು. ದಂಡ ವಿಧಿಸಿದ್ದರು. ನಾನು ಆಗ ದಂಡವನ್ನೂ ಕಟ್ಟಿದೆ. ಇಷ್ಟಕ್ಕೆ ಮುಗಿಸದೆ ಬಹಿಷ್ಕಾರ ಮಾಡಿ ಕಟ್ಟೆಗಡಿ ಪಂಚಾಯ್ತಿಯಲ್ಲಿ ೫೦,೦೦೦ ರು. ದಂಡ ವಿಧಿಸಿ. ಒತ್ತುವರಿ ತೆರವುಗೊಳಿಸದಿದ್ದರೆ, ಊರಿನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸಿ, ಆಧುನಿಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ನೊಂದ ಕುಟುಂಬವನ್ನು ಸಂಪೂರ್ಣವಾಗಿ ಸಾಮಾಜಿಕ ಶೋಷಣೆಗೆ ಗುರಿ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.ಇದೇ ರೀತಿ ನನ್ನ ಭಾವ ಸಿದ್ದರಾಜು ಎನ್.ವಿ ಕುಟುಂಬಕ್ಕೂ ಹಿಂದೆ ಸಾಮಾಜಿಕ ಬಹಿಷ್ಕಾರ ಹಾಗೂ ದಂಡ ವಿಧಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಒಂದೇ ಗ್ರಾಮದಲ್ಲಿರುವ ನನ್ನ ಮಗಳ ಮನೆಗೆ ಹೋಗುವುದಕ್ಕೂ ನಿರ್ಬಂಧ ಹೇರಿದ್ದಾರೆ ಎಂದರು. ಸಿದ್ದರಾಜು ಎನ್.ವಿ. ಮಾತನಾಡಿ, ನಾನು ಕೆಲಸದ ಮೇಲೆ ಕೊಡಗಿನಲ್ಲಿದ್ದೇನೆ. 2 ವರ್ಷದ ನಂತರ ಊರಿಗೆ ಬಂದಾಗ ನನ್ನ ಮಗಳು ಅಂತರ್ಜಾತಿ ವಿವಾಹವಾಗಿದ್ದು ಇದು ನನ್ನ ಕುಟುಂಬದ ವೈಯಕ್ತಿಕ ವಿಚಾರವಾಗಿದೆ. ಆದರೆ ಈ ವಿಷಯ ಅರಿತ ಊರಿನ ಹಿರಿಯರು ಪಂಚಾಯ್ತಿ ಸೇರಿಸಿ ವಿವಾಹದ ವಿಷಯವನ್ನು ಮುಚ್ಚಿಟ್ಟಿದ್ದೀರ ಎಂದು ಆರೋಪ ಮಾಡಿ ಪಂಚಾಯ್ತಿ ಕಟ್ಟೆ ಸೇರಿ ಆರೋಪ ಹೊರಿಸಿ ಗ್ರಾಮದ ಛಾವಡಿಯಲ್ಲಿ ೫,೦೦೦ ರು. ದಂಡ ಪಡೆದಿದ್ದಾರೆ ಎಂದು ದೂರಿದರು.
ದಂಡವನ್ನು ಪಾವತಿಸಿದ ಮೇಲೆ ಒಂದು ವೇಳೆ ವಿವಾಹವಾದ ಮಗಳೊಂದಿಗೆ ಯಾವುದೇ ರೀತಿಯ ಸಂಪರ್ಕ ಇರಿಸಿಕೊಳ್ಳಬಾರದು, ಒಂದು ವೇಳೆ ಇದನ್ನು ಮೀರಿದರೆ ಮತ್ತೆ ೧,೨೦,೦೦೦ ರು. ದಂಡ ತೆರಬೇಕು ಮತ್ತು ಊರಿನಿಂದ ಸಂಪೂರ್ಣ ಬಹಿಷ್ಕಾರ ಹಾಕಿ ಊರಿನ ಎಲ್ಲ ಕಾರ್ಯಕ್ರಮಗಳಿಗೆ ನಿಬಂಧವನ್ನು ವಿಧಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದರು. ನಾಗರಾಜು, ಲಕ್ಷ್ಮೀ, ರಾಮು ಹಾಜರಿದ್ದರು.