ಸವಿತಾ ಮಹರ್ಷಿ ಜಯಂತಿಯಂದು ವೃದ್ಧರಿಗೆ ಉಚಿತವಾಗಿ ಕೇಶವಿನ್ಯಾಸ

| Published : Feb 06 2025, 11:49 PM IST

ಸವಿತಾ ಮಹರ್ಷಿ ಜಯಂತಿಯಂದು ವೃದ್ಧರಿಗೆ ಉಚಿತವಾಗಿ ಕೇಶವಿನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಸವಿತಾ ಮಹರ್ಷಿ ಜಯಂತಿಯ ಪ್ರಯುಕ್ತ ಉಚಿತವಾಗಿ ವಯೋವೃದ್ಧರಿಗೆ ಕೇಶವಿನ್ಯಾಸ ಮಾಡಲಾಯಿತು. ಪಟ್ಟಣದ ಮುಖ್ಯ ರಸ್ತೆಯ ಗಾಣಿಗರ ಕಾಂಪ್ಲೆಕ್ಸ್ ಬಾಲಾಜಿ ಹೇರ್‌ ಡ್ರೆಸ್ಸೆಸ್‌ನಲ್ಲಿ ಉಚಿತವಾಗಿ ವೃದ್ಧರಿಗೆ ಹೇರ್‌ ಕಟಿಂಗ್ ಹಾಗೂ ಶೇವಿಂಗ್ ಮಾಡುವುದರ ಮೂಲಕ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಸವಿತಾ ಸಮಾಜದ ಕೆಲವರು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿರುವರು ಅವರು ತಮ್ಮ ಸಮಾಜದಲ್ಲಿನ ಹಿಂದುಳಿದ ಕುಟುಂಬಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ಅಗತ್ಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಸವಿತಾ ಮಹರ್ಷಿ ಜಯಂತಿಯ ಪ್ರಯುಕ್ತ ಉಚಿತವಾಗಿ ವಯೋವೃದ್ಧರಿಗೆ ಕೇಶವಿನ್ಯಾಸ ಮಾಡಲಾಯಿತು.

ಪಟ್ಟಣದ ಮುಖ್ಯ ರಸ್ತೆಯ ಗಾಣಿಗರ ಕಾಂಪ್ಲೆಕ್ಸ್ ಬಾಲಾಜಿ ಹೇರ್‌ ಡ್ರೆಸ್ಸೆಸ್‌ನಲ್ಲಿ ಉಚಿತವಾಗಿ ವೃದ್ಧರಿಗೆ ಹೇರ್‌ ಕಟಿಂಗ್ ಹಾಗೂ ಶೇವಿಂಗ್ ಮಾಡುವುದರ ಮೂಲಕ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ಸವಿತಾ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಪೂಜೆ ಸಲ್ಲಿಸಿ ಮಾತನಾಡಿದ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕೋಟೆ ಪ್ರಕಾಶ್, ಸಮಾಜದ ಎಲ್ಲಾ ವರ್ಗದ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಅನೇಕ ಮಹರ್ಷಿಗಳು ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕಾಗಿ ಸೇವೆ ಮಾಡಬೇಕೆಂಬ ಸಂಕಲ್ಪ ಮಾಡಿಸುವಲ್ಲಿ ಸವಿತಾ ಮಹರ್ಷಿಗಳು ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ. ಸವಿತಾ ಮಹರ್ಷಿಗಳ ಆದರ್ಶ ಪಾಲನೆಗೆ ನಾವೆಲ್ಲರೂ ಒತ್ತು ನೀಡಬೇಕು. ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಸಂಕುಚಿತ ಭಾವನೆಗಳನ್ನು ಹೋಗಲಾಡಿಸಲು ಸವಿತಾ ಮಹರ್ಷಿಗಳು ತಮ್ಮದೇಯಾದ ವಿಶೇಷ ಕಾರ್ಯಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಸವಿತಾ ಸಮಾಜದ ಕೆಲವರು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿರುವರು ಅವರು ತಮ್ಮ ಸಮಾಜದಲ್ಲಿನ ಹಿಂದುಳಿದ ಕುಟುಂಬಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ಅಗತ್ಯವಾಗಿದೆ ಎಂದರು.

ಇಂದಿನ ಕಾಲದಲ್ಲಿ ನಮ್ಮ ಮೂಲ ವೃತ್ತಿಗಳನ್ನು ಸಂದರ್ಭಕ್ಕೆ ತಕ್ಕಂತೆ ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಹಾಗೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಪಟ್ಟಣದ ಶ್ರೀ ಬಾಲಾಜಿ ಹೇರ್ ಡ್ರೆಸಸ್ ಮಾಲೀಕ ಹಾಗೂ ಸವಿತಾ ಸಮಾಜದ ಉಪಾಧ್ಯಕ್ಷ ಬಿ.ವಿ ನರಸಿಂಹಮೂರ್ತಿ ಅವರು ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಶೇಷವಾಗಿ ಸವಿತಾ ಮಹರ್ಷಿ ಜಯಂತಿಯನ್ನು ವಯೋವೃದ್ಧರಿಗೆ ಉಚಿತವಾಗಿ ಕಟಿಂಗ್ ಹಾಗೂ ಶೇವಿಂಗ್ ಮಾಡುತ್ತಿರುವುದು ಸವಿತಾ ಸಮಾಜಕ್ಕೆ ಹೆಗ್ಗಳಿಕೆ ತಂದಿದೆ ಎಂದರು.

ಸಮಾಜದ ಉಪಾಧ್ಯಕ್ಷ ಬಿ.ಆರ್‌. ನರಸಿಂಹಮೂರ್ತಿ ಸರ್ವರ ಹಿತವನ್ನು ಬಯಸುವವರು ಸವಿತಾ ಮಹರ್ಷಿಗಳು ಮಹರ್ಷಿಗಳೆಂದರೆ ಜ್ಞಾನದಾರರೂ ದೈವಭಕ್ತರು ಆಗಿರುತ್ತಾರೆ. ನಮಗೆ ಕ್ಷೌರಿಕ ವೃತ್ತಿ ವೈದ್ಯ ಪದ್ಧತಿ ಮಂಗಳವಾದ್ಯ ಪುರೋಹಿತ ವೃತ್ತಿಯನ್ನು ಬಹಳ ಹಿಂದೆ ಮಾಡಿಕೊಂಡು ಬರುತ್ತಿದ್ದೆವು. ಅದರಲ್ಲಿ ಕ್ಷೌರಿಕ ವೃತ್ತಿ ಹಾಗೂ ಮಂಗಳವಾದ್ಯ ಈಗ ನಡೆದುಕೊಂಡು ಬರುತ್ತಿದೆ. ವೈದ್ಯ ಪದ್ಧತಿ ಪುರೋಹಿತ ವರ್ಗ ಈಗ ಕ್ಷೀಣಿಸಿದೆ.

ಸವಿತಾ ಮಹರ್ಷಿಗಳು ನಮಗೆ ದುಡಿಯುವ ಮಾರ್ಗ ಹೇಳಿಕೊಟ್ಟಿದ್ದರಿಂದ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಹಾಗೇ ನಮ್ಮ ಅಂಗಡಿಯಿಂದ ಎರಡನೇ ಬಾರಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡುತ್ತಿದ್ದೇವೆ ಮತ್ತು ಹಿರಿಯ ನಾಗರಿಕರಿಗೆ ಈ ದಿನ ಉಚಿತವಾಗಿ ಕಟಿಂಗ್ ಮತ್ತು ಶೇವಿಂಗ್ ಅನ್ನು ಮಾಡುತ್ತಿದ್ದೇವೆ ಇದು ಪ್ರತಿ ವರ್ಷ ಕೂಡ ಆಚರಿಸುತ್ತಾ ಬರುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಧ್ಯಕ್ಷ ಆನಂದ್, ಜಯರಾಂ, ಪರಶುರಾಮ್, ಕಿಟ್ಟಣ್ಣ, ಸಂಜು, ಗೋಪಾಲ್ ಹಾಜರಿದ್ದರು.