ಸಾರಾಂಶ
ಉಚಿತ ಆರೋಗ್ಯ ತಪಾಸಣೆ ಶಿಬಿರವು ಸಾರ್ವಜನಿಕರಿಗೆ ಬಹಳಷ್ಟು ಉಪಯುಕ್ತವಾಗಿದೆ. ಹೃದಯಕ್ಕೆ ಸಂಬಂಧಿಸಿದಂತೆ ಎಕೋ, ಇಸಿಜಿ ತಪಾಸಣೆ ಹಾಗೂ ಕ್ಯಾನ್ಸರ್ ಸಂಬಂಧಿಸಿದಂತೆ ತಪಾಸಣೆಗಳನ್ನು ಮಾಡಿಸಿಕೊಂಡು ಸಾರ್ವಜನಿಕರು ಶಿಬಿರದ ಉಪಯೋಗಪಡೆದುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆ, ವೋಲ್ವೋ ಕಂಪನಿ, ನಾರಾಯಣ ಹೃದಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ಹೃದಯ ಹಾಗೂ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಯಿತು.ಬೆಳಗ್ಗೆ ಆರಂಭಗೊಂಡ ಆರೋಗ್ಯ ತಪಾಸಣೆ ಶಿಬಿರ ಸಂಜೆವರೆಗೂ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ ವಾಹನದಲ್ಲಿ ಹೃದಯಕ್ಕೆ ಸಂಬಂಧಿಸಿದ ಎಕೋ, ಇಸಿಜಿ, ಕ್ಯಾನ್ಸರ್ ಸೇರಿದಂತೆ ಬ್ರಸ್ಟ್ ಕ್ಯಾನ್ಸರ್, ರಕ್ತ ಪರೀಕ್ಷೆಯನ್ನು ನಡೆಸಲಾಯಿತು. 100ಕ್ಕೂ ಅಧಿಕ ಮಂದಿ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನಡೆಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಶಿಬಿರವು ಸಾರ್ವಜನಿಕರಿಗೆ ಬಹಳಷ್ಟು ಉಪಯುಕ್ತವಾಗಿದೆ. ಹೃದಯಕ್ಕೆ ಸಂಬಂಧಿಸಿದಂತೆ ಎಕೋ, ಇಸಿಜಿ ತಪಾಸಣೆ ಹಾಗೂ ಕ್ಯಾನ್ಸರ್ ಸಂಬಂಧಿಸಿದಂತೆ ತಪಾಸಣೆಗಳನ್ನು ಮಾಡಿಸಿಕೊಂಡು ಸಾರ್ವಜನಿಕರು ಶಿಬಿರದ ಉಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶಿಬಿರದ ವ್ಯವಸ್ಥಾಪಕ ಜಿ.ಎಂ.ದೇವರಾಜ ನಾಯಕ ಮಾತನಾಡಿ, ರಾಜ್ಯ ಸಹಕಾರ ಹಾಗೂ ವೋಲ್ವೋ ಕಂಪನಿ, ನಾರಾಯಣ ಹೃದಯಾಲಯದ ಆಸ್ಪತ್ರೆ ಸಹಯೋಗದಲ್ಲಿ ನಡೆಸುತ್ತಿರುವ ಶಿಬಿರವು ಈಗಾಗಲೇ ನಾಲ್ಕು ಜಿಲ್ಲೆಗಳಿಂದ ಸುಮಾರು 34 ಶಿಬಿರಗಳನ್ನು ನಡೆಸಿ 3700ಕ್ಕೂ ಅಧಿಕ ಜನರಿಗೆ ತಪಾಸಣೆ ನಡೆಸಿದ್ದೇವೆ ಎಂದರು.
ಈಗ ಪಾಂಡವಪುರಕ್ಕೆ ಆಗಮಿಸಿದ್ದು ನಂತರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಹ ಒಂದೊಂದು ದಿನ ಶಿಬಿರ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿ ಶಿಬಿರ ನಡೆಸಿದ ಬಳಿಕ ಹೋಬಳಿ, ಗ್ರಾಪಂ, ಗ್ರಾಮ ಹಂತದಲ್ಲೂ ಸಹ ನಡೆಸಲಾಗುವುದು ಎಂದು ಭರವಸೆ ನೀಡಿದರು.ವೋಲ್ವೋ ಕಂಪನಿಯ ರಘು, ಆರೋಗ್ಯ ಶಿಕ್ಷಣಾಧಿಕಾರಿ ಪುಟ್ಟಸ್ವಾಮಿ, ಆಶಾ ಕಾರ್‍ಯಕರ್ತೆ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಪುಷ್ಪಾವತಿ ಸೇರಿ ಹಲವರು ಭಾಗವಹಿಸಿದ್ದರು.