ಕನ್ನಡಪ್ರಭ ವಾರ್ತೆ ಅರಕಲಗೂಡುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅರಕಲಗೂಡು ಹಾಗೂ ಶ್ರೀ ಜಯಪ್ರಕಾಶ್ ನಾರಾಯಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಸನ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಭುವನಹಳ್ಳಿ ಉದ್ದೂರು ಹೊಸಳ್ಳಿ ಗ್ರಾಮಗಳ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದ ಕೆರಗೋಡು ಮೋಹನ್‌ ಕುಮಾರ್‌ ಶಿಬಿರ ಉದ್ಘಾಟಿಸಿ ಮಾತನಾಡಿ, ಎಲ್ಲರೂ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದೇ ಸತ್ಯ. ಹಲವಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸರ್ಕಾರ ಸಾಕಷ್ಟು ಬಡಜನರ ಜೀವನಕ್ಕೆ ತುಂಬಾ ಅನುಕೂಲಕರ ವ್ಯವಸ್ಥೆಯನ್ನು ಒದಗಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪ್ರತಿಯೊಂದು ಗ್ರಾಮದ ಜನರು ಪಡೆದುಕೊಳ್ಳಬೇಕು. ಈ ಮೂಲಕ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅರಕಲಗೂಡಿನ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಪರಶುರಾಮ ಶಿರೂರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಇವತ್ತು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಇಡೀ ರಾಜ್ಯಾದ್ಯಂತ ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಹಳ್ಳಿಯ ಹೆಣ್ಣುಮಕ್ಕಳಿಗೆ ಆರ್ಥಿಕತೆಯಲ್ಲಿ ಸಬಲತೆಯನ್ನು ತಂದುಕೊಡುವ ದೃಷ್ಟಿಯಿಂದ ಈ ರೀತಿಯ ಸಂಘಗಳ ಮೂಲಕ ವಾರಕ್ಕೆ ತಿಂಗಳಿಗೆ ಅವರ ಶಕ್ತಿ ಅನುಸಾರ ಉಳಿತಾಯ ಮಾಡುವುದರ ಜೊತೆಗೆ ಶಿಸ್ತುಬದ್ಧ ಜೀವನವನ್ನು ನಿರ್ವಹಣೆ ಮಾಡಲು ಅಡಿಪಾಯ ಹಾಕಿ ಪ್ರತಿಯೊಬ್ಬರು ಉತ್ತಮ ಜೀವನ ನಿರ್ವಹಣೆಗೆ ಈ ರೀತಿಯ ಸಂಘಗಳಲ್ಲಿ ಭಾಗಿಯಾಗಿ ತಮ್ಮ ದಿನನಿತ್ಯದ ಸಣ್ಣಪುಟ್ಟ ಅಡಚಣೆಗಳನ್ನು ನಿಭಾಯಿಸಿಕೊಂಡು ಹೋಗಲು ಸಹಕರಿಸುತ್ತಿದೆ. ಮುಂದುವರಿದ ದಿನದಲ್ಲಿ ತಾವು ಪಡೆದುಕೊಂಡಿರುವಂತಹ ಸಾಲವನ್ನ ಪ್ರತಿ ತಿಂಗಳು ತಿಂಗಳು ಕಟ್ಟುತ್ತಾ ಹೋಗಿ ಸಾಲಮುಕ್ತರಾಗಿ ವ್ಯವಸ್ಥಿತ ಜೀವನ ನಿರ್ವಹಣೆ ಕ್ರಮವನ್ನ ರೂಢಿಸಿಕೊಳ್ಳಲು ತುಂಬಾ ಉಪಯುಕ್ತವಾದ ವಿಧಾನವಾಗಿದೆ. ಒಕ್ಕೂಟದ ಅಧ್ಯಕ್ಷರಾದ ಕಾಂತರಾಜ್ ಮಾತನಾಡಿ, ಸರ್ಕಾರ ಸಾಕಷ್ಟು ಈ ರೀತಿಯ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟಂತ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಂಘದ ಪ್ರತಿಯೊಬ್ಬ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಜನರು ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಹೊಳೆನರಸೀಪುರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮ್ತಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಅತಿಯಾಗಿ ಮೊಬೈಲ್ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕಣ್ಣಿನ ದೃಷ್ಟಿ ಕಳೆದುಕೊಂಡಿರುವಂತಹ ಸಾಕಷ್ಟು ಪ್ರಕರಣಗಳು ಕಂಡುಬರುತ್ತಿದ್ದು ಮೊಬೈಲ್ ಹಾವಳಿಯಿಂದ ಸಾಕಷ್ಟು ಯುವಕ ಯುವತಿಯರು ಹಾಳಾಗುತ್ತಿದ್ದಾರೆ. ಇದರಿಂದ ಜನರು ಅತಿಯಾಗಿ ಮೊಬೈಲ್ ಬಳಸುವುದನ್ನು ನಿಯಂತ್ರಣದಲ್ಲಿ ತಂದುಕೊಳ್ಳಬೇಕು. ಉತ್ತಮ ಆಹಾರ ಪದ್ಧತಿಗಳನ್ನು ರೂಢಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು ಇವುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.ಪ್ರಯೋಗ ಶಾಲಾ ತಂತ್ರಜ್ಞರಾದ ಅಶೋಕ ಹಾಸನ ಇವರು ಮಾತನಾಡಿ, ಆರೋಗ್ಯವೇ ಭಾಗ್ಯ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ಪ್ರತಿಯೊಬ್ಬರು ನಿಗದಿತ ಸಮಯದಲ್ಲಿ ರಕ್ತ ತಪಾಸಣೆ ಮಾಡಿಸಿಕೊಂಡು ತಮ್ಮ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕೆಂದು ಹೇಳಿದರು. ಕ್ಷೇತ್ರ ಆರೋಗ್ಯ ಮೇಲ್ವಿಚಾರಕರು ಟಿ ಐ ಯೋಜನೆ ಸ್ವಪ್ನ, ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನವಿಕಾಸದ ಸಮನ್ವಯಾಧಿಕಾರಿ ಶೀಲಾ, ವಲಯ ಮೇಲ್ವಿಚಾರಕಿ ರೂಪ, ಸೇವಾ ಪ್ರತಿನಿಧಿ ಪಲ್ಲವಿ, ಎಬಿಆರ್‌ಕೆ ಸಿಬ್ಬಂದಿ ಅರುಣ್ ಟಿ ಐ, ಮ್ಯಾನೇಜರ್‌ ಹೇಮಲತಾ, ಸಹವರ್ತಿ ಶಿಕ್ಷಕಿ ಹಾಗೂ ಧರ್ಮಸ್ಥಳ ಸಂಘದ ಎಲ್ಲಾ ಸರ್ವ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.