ಸಾರಾಂಶ
ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ, ಆದರೆ ಆರೋಗ್ಯ ಕೈ ಕೊಟ್ಟಾಗ ದುಡಿದ ಹಣ ಪೂರ್ತಿ ಸುರಿಯುತ್ತೇವೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರವರೆಗೂ ಸಹ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಾಘಾತದಂಥ ರೋಗಗಳು ಹೆಚ್ಚುತ್ತಿದ್ದು, ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳು ನಡೆಯುವುದರಿಂದ, ಬಡ ಜನತೆಗೆ ತುಂಬಾ ಅನುಕೂಲವಾಗುತ್ತದೆ ಎಂದು ಸಿ.ಎಸ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜು ತಿಳಿಸಿದರು.ತಾಲೂಕಿನ ಸಿ.ಎಸ್. ಪುರ ಗ್ರಾಮದಲ್ಲಿ ಸೋಷಿಯಲ್ ಆ್ಯನಿಮೇಷನ್ ಸೆಂಟರ್ ಫಾರ್ ರೂರಲ್ ಎಜುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಎಸ್.ಎಂ.ಎಫ್.ಜಿ ಗ್ರಾಮ್ ಶಕ್ತಿ ಹಾಗೂ ಎಸ್.ಎಲ್.ಆರ್ ಆಸ್ಪತ್ರೆ ಗುಬ್ಬಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ, ಆದರೆ ಆರೋಗ್ಯ ಕೈ ಕೊಟ್ಟಾಗ ದುಡಿದ ಹಣ ಪೂರ್ತಿ ಸುರಿಯುತ್ತೇವೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರವರೆಗೂ ಸಹ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಾಘಾತದಂಥ ರೋಗಗಳು ಹೆಚ್ಚುತ್ತಿದ್ದು, ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಎಸ್ ಡಬ್ಲ್ಯೂ ಎ ಆರ್ ಡಿ ಎಸ್ ಸಂಸ್ಥೆಯ ಸಿಬ್ಬಂದಿ ಶ್ರೀನಿವಾಸ್ ಮೂರ್ತಿ ಮಾತನಾಡಿ, ಆಧುನಿಕತೆ ಬೆಳೆದಂತೆ ಕಾಯಿಲೆಗಳು ಹೊಸ ಹೊಸ ರೀತಿಯಲ್ಲಿ ಉಲ್ಬಣಗೊಳ್ಳುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಕಾಯಿಲೆಯ ಮುನ್ಸೂಚನೆ ಕಂಡುಬಂದ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಶಿಬಿರದಲ್ಲಿ ವೈದ್ಯ ಸುನಿಲ್ ಕುಮಾರ್, ಎಸ್. ಎಲ್. ಆರ್ ಆಸ್ಪತ್ರೆಯ ಮೇಲ್ವಿಚಾರಕ ಹರೀಶ್, ಸೆಲ್ಕೋ ಸಂಸ್ಥೆಯ ಪಣೀಂದ್ರ ಕುಮಾರ್ ಸೇರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಸಾರ್ವಜನಿಕರು ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.