ಸಾರಾಂಶ
ಐಗಳಿ : ಆರೋಗ್ಯ ಕಡೆ ಗಮನ ಹರಿಸಿ. ಚಿಕ್ಕ ವಯಸ್ಸಿನಲ್ಲಿಯೇ ಅಕಾಲಿಕ ನಿಧನಗಳ ಸಂಖ್ಯೆ ಹೆಚ್ಚಿದೆ. ಗಳಿಸಿದ ಆಸ್ತಿ, ಹಣ ಕಳುವು ಆಗಬಹುದು ಶರೀರ ಸಂಪತ್ತು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ವಿಜಯಪುರದ ಡಾ.ಉಮಾಮಹೇಶ್ವರ ಸಿಂಧೂರ ಹೇಳಿದರು.
ಸ್ಥಳೀಯ ಸಿಂಧೂರ ವಸತಿಯಲ್ಲಿ ಅಪ್ಪಯ್ಯ ಸ್ವಾಮಿ ಜಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಮೊದಲಿನ ಜನರು ಜವಾರಿ ಆಕಳು ಸಾಕಿ ಹಾಲು ಕುಡಿಯುತ್ತಿದ್ದರು. ಅವರ ನೆಮ್ಮದಿಯ ಜೀವನ ಇತ್ತು. 100 ವರ್ಷ ಆರಾಮದಿಂದ ಬದುಕುತ್ತಿದ್ದರು. ಈಗಿನ ಯುವಕರಿಗೆ ಮಾದಕ ವಸ್ತು ಸೇವನೆಗೆ ಬಲಿಯಾಗಿ ಶರೀರ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಆಹಾರ ಸೇವಿಸಿ ಆರೋಗ್ಯವಂತರಾಗೋಣ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಗೌಡ ಪಾಟೀಲ ಮಾತನಾಡಿ, ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗಿದೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಆರೋಗ್ಯದಿಂದ ಇರಬೇಕು. ಹೊರಗಿನ ಊಟಕ್ಕಿಂತ ತಾಯಿಯ ತುತ್ತಿನಲ್ಲಿ ಶಕ್ತಿ ಇದೆ. ಯುವಕರು ದಾರಿ ತಪ್ಪಿದಂತೆ ನೋಡಿಕೊಳ್ಳಿ ಎಂದರು.
ಸಾನ್ನಿಧ್ಯ ವಹಿಸಿದ ಬಸವಲಿಂಗ ಸ್ವಾಮೀಜಿ, ಜಾತ್ರಾ ಕಮಿಟಿಯ ಅಧ್ಯಕ್ಷ ನರಸಪ್ಪ ಸಿಂಧೂರ, ಸಿದಗೌಡ ಪಾಟೀಲ, ಶಿದ್ರಾಮ ಸಿಂಧೂರ, ಹಣಮಂತ ಕರಿಗಾರ, ಶಿವಾನಂದ ಸಿಂಧೂರ, ಕೆ.ಎಸ್.ಬಿರಾದಾರ, ಡಾ. ಉಮಾ ಮಹೇಶ್ವರ ಸಿಂಧೂರ ದಂಪತಿ ಸುಮಾರು 200 ಜನರ ಆರೋಗ್ಯ ತಪಾಸಣೆ ಮಾಡಿದರು.