ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎಂ ಚಂಗಪ್ಪ ಮತ್ತು ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಅವರು ಚಾಲನೆ ನೀಡಿದರು.
ಶಿಬಿರದಲ್ಲಿ ಹೃದಯ ರೋಗ ತಜ್ಞರು, ನರರೋಗ, ಮೂತ್ರಪಿಂಡ, ಮಧುಮೇಹ ಪಿತ್ತಜನಕಾಂಗ ತಜ್ಞರು ಅಲ್ಲದೆ ದಂತ ವೈದ್ಯರು, ಕಿವಿ ಮೂಗು ಗಂಟಲು ತಜ್ಞರು ಪಾಲ್ಗೊಂಡು ರೋಗಿಗಳ ತಪಾಸಣೆ ಮಾಡಲಾಯಿತು.ಶಿಬಿರದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 500ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ನುರಿತ ತಜ್ಞ ವೈದ್ಯರಿಂದ ರೋಗಗಳ ತಪಾಸಣೆ ಇಸಿಜಿ ರಕ್ತ ಪರೀಕ್ಷೆ ಮತ್ತು ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.
ವೈದ್ಯಕೀಯ ತಪಾಸಣೆ ನಂತರ ಅಗತ್ಯವುಳ್ಳ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಗುರುತಿನ ಚೀಟಿ ನೀಡಲಾಯಿತು.ಆಸ್ಪತ್ರೆ ವಾಹನದಲ್ಲಿಯೇ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಹೆಚ್ಚಿನ ಚಿಕಿತ್ಸೆ ನೀಡಿ ಪುನ ವಾಪಸ್ ಕಳಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ ಕೆ ದಿನೇಶ್ ತಿಳಿಸಿದರು.
ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನಯ್ ಕುಮಾರ್, ವೈದ್ಯಾಧಿಕಾರಿಗಳಾದ ಡಾ.ಪಿ ಶ್ರೀನಿವಾಸ್, ಡಾ. ಲಕ್ಷ್ಮಿ ಸೇರಿದಂತೆ ಐವತ್ತಕ್ಕೂ ಅಧಿಕ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಂಡಿತ್ತು.ಅಂದಾಜು 70ಕ್ಕೂ ಅಧಿಕ ಸಿಬ್ಬಂದಿ, ವಿವಿಧ ವಿಭಾಗಗಳ ತಜ್ಞರ ಜೊತೆ ಶಿಬಿರದಲ್ಲಿ ತಪಾಸಣೆಗೆ ಕೈಜೋಡಿಸಿದರು.
ಮುಂದಿನ ದಿನಗಳಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯ ಜನರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸುವ ಚಿಂತನೆ ಹರಿಸಲಾಗಿದೆ ಎಂದು ತಾಲೂಕು ಅಧ್ಯಕ್ಷರಾದ ಎಂ ಕೆ ದಿನೇಶ್ ತಿಳಿಸಿದರು.ಇದೇ ಸಂದರ್ಭ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡ ದೃಶ್ಯ ಕಂಡು ಬಂತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಆಯೋಜಕರ ಮೂಲಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಂ ಎಂ ಪ್ರಕಾಶ್, ಖಜಾಂಚಿ ಡಿ ಸಿ ಅರುಣ್ ಕುಮಾರ್, ನಿರ್ದೇಶಕರಾದ ಜಿ ಬಿ ಜಗದೀಶ್, ಎಂ ಕೆ ಹನುಮರಾಜು, ವಿ ಜೆ ನವೀನ್ ಕುಮಾರ್, ಎಚ್ ಎಂ ಭಾನುಪ್ರಕಾಶ್, ಎಂ ಎನ್ ಮೂರ್ತಿ, ರಮೇಶ್, ಕೆ ಜೆ ಗಾಯತ್ರಿ, ಎಚ್ಎಂ ರಶ್ಮಿ, ಸುಲೋಚನಾ, ಕೆ ಎಸ್ ಗೌರಮ್ಮ ಮತ್ತಿತರರು ಇದ್ದರು.