ಸಾರಾಂಶ
ಉರ್ದು ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅನ್ನದಾನ, ವಿದ್ಯಾದಾನಗಳಿಗಿಂತ ಆರೋಗ್ಯದಾನ ಮಿಗಿಲು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಉರ್ದು ಶಾಲೆಯಲ್ಲಿ ನ್ಯಾಷನಲ್ ವೆಲ್ಫೇಫೇರ್ ಚಾರಿಟಬಲ್ ಟ್ರಸ್ಟ್ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಅನ್ನದಾನ, ವಿದ್ಯಾದಾನ ಶ್ರೇಷ್ಠ ಎನ್ನುತ್ತಾರೆ. ಆದರೆ, ಸರ್ಕಾರ ಅಥವಾ ಟ್ರಸ್ಟ್ ನಿಂದ ಬಡವರಿಗೆ ನಡೆಸುವ ಉಚಿತ ಆರೋಗ್ಯ ಶಿಬಿರಗಳು ಎಲ್ಲಕ್ಕಿಂತ ಮಿಗಿಲು. ಯಾವುದೇ ಸರ್ಕಾರ ಇರಲಿ ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ಕೊಡಬೇಕು. ಅದರಿಂದ ಬಡವರಿಗೆ ಒಳ್ಳೆಯದಾಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತಾಡುತ್ತಿದ್ದೇವೆ. ಒಂದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ದೊರೆತರೆ ಇನ್ಯಾವುದು ಅವರಿಗೆ ಉಚಿತ ಕೊಡುಗೆ ಬೇಡ. ಆರೋಗ್ಯ ಚೆನ್ನಾಗಿದ್ದರೆ ಏನೆಲ್ಲಾ ಸಂಪಾದನೆ, ಸಾಧನೆ ಮಾಡಲು ವಿಫುಲ ಅವಕಾಶಗಳಿವೆ ಎಂದರು.ಯಾವುದೇ ಧರ್ಮದ ಜನರಿರಲಿ ಅವರು ದೇವರಲ್ಲಿ ಮೊದಲು ಬೇಡುವುದೆ ಆರೋಗ್ಯ ಚೆನ್ನಾಗಿರಲೆಂದು, ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ. ಮಧ್ಯಮ ಮತ್ತು ಬಡವರಿಗೆ ದೊಡ್ಡ ಕಾಯಿಲೆಗಳು ಬಾರದಿರಲಿ. ಬಂದರೆ ಅವರು ಎಲ್ಲ ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗುತ್ತಾರೆ ಎಂದು ಹೇಳಿದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಫಿಉಲ್ಲಾ ಮಾತನಾಡಿ, ಬಡ ಜನರಿಗೆ ಉಚಿತ ಚಿಕಿತ್ಸೆ, ಸೌಲಭ್ಯ ಸಿಗಬೇಕು ಎಂಬುದು ಟ್ರಸ್ಟ್‌ನ ಉದ್ದೇಶ. ಕಾಯಿಲೆ ಎನ್ನುವುದು ಬಡವ ಬಲ್ಲಿದ ಎಂಬುದನ್ನು ನೋಡಿ ಬರುವುದಿಲ್ಲ. ಹೀಗಾಗಿ ಸರಕಾರ ಎಲ್ಲರಿಗೂ ಸಮಾನ ಚಿಕಿತ್ಸೆ ಹಾಗೂ ಸೌಲಭ್ಯ ನೀಡಬೇಕು. ಕಣಚೂರು ಮೆಡಿಕಲ್ ಕಾಲೇಜು ಶೇ.90 ರಷ್ಟು ಸೌಲಭ್ಯ ನೀಡುವ ಮೂಲಕ ಇಂದು ಉಚಿತ ಚಿಕಿತ್ಸಾ ಶಿಬಿರ ನಡೆಸುತ್ತಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ರಿಯಾಜ್‌ಖಾನ್ ಮಾತನಾಡಿ, ಟ್ರಸ್ಟ್ ನಿಂದ ಆರ್ಥೋ, ಕ್ಯಾನ್ಸರ್ ಮತ್ತಿತರೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಅನೇಕರನ್ನು ಕಣಚೂರು ಮೆಡಿಕಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೇವೆ. ನಮ್ಮಆರೋಗ್ಯ ತಪಾಸಣೆ ಶಿಬಿರ ವರ್ಷವಿಡಿ ಇರಲಿದೆ. ನ್ಯಾಷನಲ್ ಟ್ರಸ್ಟ್ ನಿಂದ ಎರಡೂವರೆ ಸಾವಿರ ಆಪರೇಷನ್ ಮಾಡಿಸಿದ್ದೇವೆ ಎಂದು ಹೇಳಿದರು.ಕಣಚೂರು ಆಸ್ಪತ್ರೆ ಮುಖ್ಯಸ್ಥ ಡಾ.ಅಬ್ದುಲ್ ರೆಹಮಾನ್ ಮಾತನಾಡಿದರು. ಮುಖಂಡ ಷಹಬುದ್ದೀನ್ , ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಸಿಪಿಐ ಮುಖಂಡ ಬಿ.ಅಮ್ಜದ್, ಸಿಡಿಎ ಮಾಜಿ ಅಧ್ಯಕ್ಷ ಅತೀಕ್ ಖೈಸರ್, ಉಪಾಧ್ಯಕ್ಷ ಸೈಯದ್ ಗೌಸ್ ಮೋಹಿದ್ದೀನ್ ಶಾ, ನಿರ್ದೇಶಕರಾದ ಅಕ್ಮಲ್, ಇಕ್ಬಾದ್ ಅಹಮದ್, ಅನ್ವರ್, ರಫೀಕ್ ಅಹಮದ್, ಅಸ್ಲಾಮ್, ಪರ್ವೀಜ್, ಜಿಯಾ, ಪೈರಜ್ ಅಹಮದ್ ಉಪಸ್ಥಿತರಿದ್ದರು.
26 ಕೆಸಿಕೆಎಂ 1ಚಿಕ್ಕಮಗಳೂರಿನ ಉರ್ದು ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು.