ಪ್ರೌಢಶಾಲಾ ಶಿಕ್ಷಕರನ್ನು ಬೋಧಕೇತರ ಕಾರ್ಯದಿಂದ ಮುಕ್ತಗೊಳಿಸಲು ಮನವಿ

| Published : Dec 12 2024, 12:31 AM IST

ಪ್ರೌಢಶಾಲಾ ಶಿಕ್ಷಕರನ್ನು ಬೋಧಕೇತರ ಕಾರ್ಯದಿಂದ ಮುಕ್ತಗೊಳಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೌಢಶಾಲಾ ಸಹ ಶಿಕ್ಷಕರನ್ನು ಬೋಧಕೇತರ ಕಾರ್ಯದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ವಿಪ ಸದಸ್ಯ ಎಸ್.ವಿ. ಸಂಕನೂರ ಹಾಗೂ ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಪ್ರೌಢಶಾಲಾ ಸಹ ಶಿಕ್ಷಕರನ್ನು ಬೋಧಕೇತರ ಕಾರ್ಯದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ವಿಪ ಸದಸ್ಯ ಎಸ್.ವಿ. ಸಂಕನೂರ ಹಾಗೂ ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಫ್. ಪೂಜಾರ ಮಾತನಾಡಿ, ಪ್ರೌಢಶಾಲಾ ಸಹಶಿಕ್ಷಕರು ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ನಿರಂತರವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ನೀಡುವ ಎಲ್ಲ ಕಾರ್ಯ ಚಾಚು ತಪ್ಪದೇ ನಿರಂತರವಾಗಿ ಮಾಡುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಅಲ್ಲದೇ ಶಿಕ್ಷಕರಿಗಾಗಿ ಬೋಧನಾ ಕಾರ್ಯಕ್ಕಿಂತ ಬೋಧಕೇತರ ಕಾರ್ಯಗಳ ಹೊರೆ ಹೆಚ್ಚಾಗುತ್ತಿದ್ದು, ಇದು ಶಿಕ್ಷಕರ ಮನೋಸ್ಥೈರ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿರುವುದರಿಂದ ಬೋಧಕೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರೌಢಶಾಲಾ ಸಹಶಿಕ್ಷಕರ ಬೇಡಿಕೆಗಳ ಕುರಿತು ಪರಿಹಾರ ಒದಗಿಸಬೇಕು. ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ವಿನ್ಯಾಸ ಸರಳೀಕರಣಗೊಳಿಸಬೇಕು. ಪರೀಕ್ಷಾ ಪದ್ಧತಿಯಲ್ಲಿ 3 ಹಂತದ ಪರೀಕ್ಷೆಗಳ ಬದಲು ಈ ಹಿಂದಿನಂತೆ 2 ಪರೀಕ್ಷೆ ಆಯೋಜಿಸಬೇಕು. ಸಿ.ಬಿ.ಎಸ್.ಸಿ ಪರೀಕ್ಷಾ ಮಾದರಿಯಂತೆ ಆಂತರಿಕ ಅಂಕ ಪರಿಗಣಿಸಿ ಫಲಿತಾಂಶ ನೀಡಬೇಕು. ಪಪೂ ಇಲಾಖೆಗೆ ಶೀಘ್ರವಾಗಿ ಬಡ್ತಿ ನೀಡಬೇಕು. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಪ್ರಾಥಮಿಕದಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರಿಗೆ ಕಾಲಮಿತಿ ಬಡ್ತಿ ಮಂಜೂರಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ವಿಪ ಸದಸ್ಯ ಎಸ್‌.ವಿ. ಸಂಕನೂರ ಅವರು, ಸಹಶಿಕ್ಷಕರಿಗೆ ಬೇಡಿಕೆಗಳು ಅತ್ಯಂತ ಸೂಕ್ತವಾಗಿದ್ದು, ಸದನದ ಒಳಗೆ ಹಾಗೂ ಹೊರಗೆ ನಿರಂತರವಾಗಿ ಒತ್ತಡ ತರಲಾಗುವುದು, ಶಿಕ್ಷಕ ಸಂತೃಪ್ತಿಯಿಂದ ಇದ್ದಾಗ ಮಾತ್ರ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯ. ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಶರಣಪ್ಪ ನಾಗರಳ್ಳಿ, ರವಿರಾಜ ಪವಾರ, ಎಸ್.ಸಿ.ಹರ್ತಿ, ಶರಣು ಡಾಣಾಪುರ, ವೆಂಕಟೇಶ ಅರ್ಕಸಾಲಿ, ಎಂ.ಎಚ್. ಗುತ್ತಲ್, ಎಸ್.ಎಸ್. ಗಾಳಿ, ಉಮಾ ಮಟ್ಟಿ, ಶಾಂತಕುಮಾರ ಭಜಂತ್ರಿ ಸೇರಿದಂತೆ ಪ್ರೌಢಶಾಲಾ ಸಹಶಿಕ್ಷಕರು ಇದ್ದರು. ಎಂ.ಎಸ್. ಗಾರವಾಡ ಸ್ವಾಗತಿಸಿದರು. ಪಿ.ಪಿ. ಟಿಕಾರೆ ವಂದಿಸಿದರು.