ಶ್ರೀ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್ ಹಾಗೂ ಸೊರಟೂರಿನ ದುರ್ಗಾದೇವಿ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ದಸರಾ ಮಹೋತ್ಸವ ಅಂಗವಾಗಿ 2ನೇ ವರ್ಷದ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಅ. 18ರಂದು ಬೆಳಗ್ಗೆ 10ಕ್ಕೆ ಸಮೀಪದ ಸೊರಟೂರ ಗ್ರಾಮದಲ್ಲಿ ನಡೆಯಲಿವೆ.
ಕನ್ನಡಪ್ರಭ ವಾರ್ತೆ ಮುಳಗುಂದ
ಶ್ರೀ ಆದಿಶಕ್ತಿ ವಿವಿಧೋದ್ದೇಶಗಳ ಟ್ರಸ್ಟ್ ಹಾಗೂ ಸೊರಟೂರಿನ ದುರ್ಗಾದೇವಿ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ದಸರಾ ಮಹೋತ್ಸವ ಅಂಗವಾಗಿ 2ನೇ ವರ್ಷದ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಅ. 18ರಂದು ಬೆಳಗ್ಗೆ 10ಕ್ಕೆ ಸಮೀಪದ ಸೊರಟೂರ ಗ್ರಾಮದಲ್ಲಿ ನಡೆಯಲಿವೆ ಎಂದು ಮುಖಂಡ ಶಿವಾನಂದ ಎಸ್. ಮಾದಣ್ಣವರ ತಿಳಿಸಿದರು.ಸೊರಟೂರ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಸೊರಟೂರ- ಗುಡ್ಡದಾನ್ವೇರಿ ಅನ್ನದಾನೇಶ್ವರ ಶಾಖಾಮಠದ ಶಿವಯೋಗೀಶ್ವರ ಸ್ವಾಮಿಗಳು, ಸೊರಟೂರ ಓಂಕಾರೇಶ್ವರಗಿರಿ ಫಕೀರೇಶ್ವರ ಶಿವಾಚಾರ್ಯ ಶ್ರೀಗಳು ಹಾಗೂ ವರವಿಯ ಮೌನೇಶ್ವರ ಸ್ವಾಮಿಗಳು ವಹಿಸುವರು ಎಂದರು.
ಪರಶುರಾಮ ಹೂಗಾರ ಮಾತನಾಡಿ, ಕಳೆದ ವರ್ಷ 11 ಜೋಡಿಗಳ ವಿವಾಹ ನಡೆದಿತ್ತು, ಪ್ರಸಕ್ತ ವರ್ಷ 15 ಜೋಡಿಗಳ ವಿವಾಹ ನಡೆಯಲಿದ್ದು, 10-15 ಸಾವಿರ ಜನ ಆಗಮಿಸುವ ನಿರೀಕ್ಷೆಯಿದೆ. ಪ್ರಸಾದ ವ್ಯವಸ್ಥೆ ಇದೆ. ಹಾಗೇ ನವದಂಪತಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ವಿವಾಹ ನೋಂದಣಿಯನ್ನು ಮಾಡಿಸಿ ಪ್ರಮಾಣಪತ್ರ ಕೊಡಲಾಗುತ್ತದೆ. ಇಂತಹ ಬರಗಾಲ ಪರಿಸ್ಥಿತಿಯಲ್ಲೂ ಸೊರಟೂರ ಗ್ರಾಮದಲ್ಲಿ ಶಿವಾನಂದ ಮಾದಣ್ಣವರ ಅವರು ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಯಾವುದೇ ಜಾತಿ, ಭೇದ ಮಾಡದೇ ಉಚಿತವಾಗಿ ಸರ್ವ ಧರ್ಮ ಸಾಮೂಹಿಕ ವಿವಾಹಗಳನ್ನು ಮಾಡಿಕೊಡುತ್ತಿದ್ದಾರೆ, ಅವರ ಈ ಸಾಮಾಜಿಕ ಸೇವೆ ಮಾದರಿಯಾಗಿದೆ ಎಂದರು.ಈ ವೇಳೆ ಹಿರಿಯರಾದ ರಾಮಣ್ಣ ಕಮ್ಮಾರ, ಸಿ.ಬಿ. ಸಂಶಿ, ತಿರಕಪ್ಪ ಬೋಳನವರ, ಮಹಾದೇವಪ್ಪ ಅಡರಕಟ್ಟಿ, ಶಿವಪ್ಪ ಹೋಳಿಗೆ, ಮರಿಗೆಪ್ಪ ಕುಸ್ಲಾಪುರ, ಶಿವನಪ್ಪ ಚಪಾತಿ, ಕರಿಯಪ್ಪ ಜಂಗವಾಡ, ಚಂದ್ರಪ್ಪ ಮಲ್ಲಾಡದ, ಸದ್ದಾಂ ಬಾಬುಖಾನವರ ಇದ್ದರು.