ಬಡವ,ನಿರ್ಗತಿಕರಿಗೆ ಉಚಿತ ಕಾನೂನು ನೆರವು

| Published : Nov 10 2024, 01:35 AM IST

ಸಾರಾಂಶ

ಎರಡೂ ಕಕ್ಷಿದಾರರ ಒಪ್ಪಿಗೆಯಿಂದ ಲೋಕ್ ಆದಾಲತ್ ನಲ್ಲಿ ರಾಜೀ ಸಂಧಾನಕ್ಕೆ ಮುಂದಾಗಿ ಪ್ರಕರಣ ಬಗೆಹರಿಸಿಕೊಂಡರೆ ಇಬ್ಬರೂ ಗೆಲ್ಲುತ್ತಾರೆ. ಜತೆಗೆ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ, ಸಾಕಷ್ಟು ಸಮಯ ಉಳಿಯುತ್ತದೆ

ಗದಗ: ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದ್ದು, ಈ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವುದರ ಜತೆಗೆ ಉಚಿತ ಬಡವ, ನಿರ್ಗತಿಕರಿಗೆ ಕಾನೂನು ನೆರವು ನೀಡುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.

ನಗರದ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕೆ.ಎಲ್.ಇ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಅಶಕ್ತರು, ದುರ್ಬಲರು ಸೇರಿದಂತೆ ಎಲ್ಲರಿಗೂ ಕಾನೂನು ದೊರೆಯಬೇಕು ಎಂಬ ಆಶಯ ಇದೆ, ಆ ಆಶಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನೆರವೇರಿಸುತ್ತಿದೆ ಎಂದರು.

ಜಿಲ್ಲಾ‌ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, 1995ನೇ ನ. 9 ರಂದು ದೇಶದಲ್ಲಿ ಲೀಗಲ್ ಸರ್ವೀಸ್ ಆ್ಯಕ್ಟ್ ಜಾರಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನ. 9 ರಂದು ದೇಶಾದ್ಯಂತ ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರದ ವ್ಯಾಪ್ತಿ ಬಹಳ ವಿಶಾಲವಾಗಿದ್ದು, ಇದು ಜನರಲ್ಲಿ ನಿರಂತರವಾಗಿ ಲೀಗಲ್ ಏಡ್ ಕ್ಲಿನಿಕ್ ಮೂಲಕ ಉಚಿತವಾಗಿ ಕಾನೂನು ಸಲಹೆ ನೀಡುತ್ತಾ ಬಂದಿದೆ. ಪ್ರಾಧಿಕಾರದಲ್ಲಿ ಪ್ಯಾನಲ್ ವಕೀಲರು ಹಾಗೂ ಕಾನೂನು ನೆರವು ಅಭಿರಕ್ಷಕರನ್ನು ನೇಮಿಸಿಕೊಂಡು ಬಡವರಿಗೆ, ಮಹಿಳೆಯರಿಗೆ ಉಚಿತವಾಗಿ ಕಾನೂನು ನೇರವು ನೀಡುತ್ತಿದೆ ಎಂದು ತಿಳಿಸಿದರು.

ಯಾವುದೇ ವ್ಯಾಜ್ಯ ನ್ಯಾಯಾಲಯದ ಎದುರು ಬಂದಾಗ ವಾದ ವಿವಾದ ಆಲಿಸಿ ತೀರ್ಪು ನೀಡಲಾಗುತ್ತದೆ. ತೀರ್ಪು ಬರಲು ಹೆಚ್ಚಿನ ಸಮಯ ಬೇಕಾಗುತ್ತದೆಯಾದರೂ ಪ್ರಕರಣದಲ್ಲಿ ಕೊನೆಗೆ ಒಬ್ಬರ ಗೆಲುವು,ಇನ್ನೊಬ್ಬರ ಸೋಲಾಗುತ್ತದೆ. ಆದರೆ ಎರಡೂ ಕಕ್ಷಿದಾರರ ಒಪ್ಪಿಗೆಯಿಂದ ಲೋಕ್ ಆದಾಲತ್ ನಲ್ಲಿ ರಾಜೀ ಸಂಧಾನಕ್ಕೆ ಮುಂದಾಗಿ ಪ್ರಕರಣ ಬಗೆಹರಿಸಿಕೊಂಡರೆ ಇಬ್ಬರೂ ಗೆಲ್ಲುತ್ತಾರೆ. ಜತೆಗೆ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ, ಸಾಕಷ್ಟು ಸಮಯ ಉಳಿಯುತ್ತದೆ ಎಂದರು.

ಮುಖ್ಯ ಕಾನೂನು ನೆರವು ಅಭಿರಕ್ಷಕ ಎಸ್.ವಿ. ಗ್ರಾಮಪುರೋಹಿತ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಸರ್ವರಿಗೂ ನ್ಯಾಯ ದೊರಕಬೇಕು ಎಂಬ ಆಶಯ ಇದೆ. ಅದು ನಮ್ಮ ಮೂಲಭೂತ ಹಕ್ಕು ಹೌದು. ಈ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಕಾಯ್ದೆ ಜಾರಿಗೆ ಬಂದಿದೆ. ಪ್ರಾಧಿಕಾರದಿಂದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಬಡವರಿಗೆ ನೆರವನ್ನು ನೀಡುತ್ತಿದೆ. 2022ರಲ್ಲಿ ಎಲ್.ಎ.ಡಿ.ಸಿ ಪ್ರಾರಂಭಿಸಿ, ಅದರ ಮೂಲಕ ಸೇವೆ ನೀಡುತ್ತಿದೆ ಎಂದರು.

ಈ ವೇಳೆ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ ಹಾಗೂ ಪ್ರಾ. ಜೈಹನುಮಾನ ಎಚ್.ಕೆ. ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕಾನೂನು ವಿದ್ಯಾರ್ಥಿಗಳು ಇದ್ದರು. ಶರತಕುಮಾರ ಪ್ರಾರ್ಥಿಸಿದರು. ಅಧ್ಯಾಪಕಿ ಜ್ಯೋತಿ.ಸಿ.ವಿ ಸ್ವಾಗತಿಸಿದರು. ಪ್ರೊ.ವಿ.ವಿ. ಮುರದಂಡೆ ವಂದಿಸಿದರು.