ಮುಂದಿನ ಚಿಕಿತ್ಸೆ ಮತ್ತು ಅಗತ್ಯ ಪರೀಕ್ಷೆಗಳಿಗೆ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳಿದ್ದು, ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ಹಾಗೂ ರೋಗನಿರ್ಣಯದ ಸೇವೆ ಪಡೆಯುವ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಬೆಳವಣಿಗೆಯ ವಿಳಂಬ ಹಾಗೂ ವಿವಿಧ ತೊಂದರೆಗಳನ್ನು ಹೊಂದಿರುವ ಮಕ್ಕಳಿಗಾಗಿ ನಿಧಿ ಫೌಂಡೇಶನ್ ಫಾರ್ ಅರ್ಲಿ ಇಂಟರ್ವೆನ್ಷನ್ಸ್ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ನಿಧಿ ಫೌಂಡೇಶನ್ ಆಹ್ವಾನದ ಮೇರೆಗೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಯೂನಿಟ್ ಆಫ್ ಹೋಪ್‌ನ ಐವರು ಅನುಭವಿ ವೈದ್ಯರು ಹಾಗೂ ಅರ್ಲಿ ಇಂಟರ್ವೆನ್ಷನ್ಸ್ ತಂಡದ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಶಿಶುವೈದ್ಯರು, ಮಕ್ಕಳ ಮನೋವೈದ್ಯರು, ಮಕ್ಕಳ ಮನಃಶಾಸ್ತ್ರಜ್ಞರು, ಫಿಜಿಯೋಥೆರಪಿಸ್ಟ್‌ಗಳು ಹಾಗೂ ವಾಕ್‌ಶಾಸ್ತ್ರಜ್ಞರು ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಒಟ್ಟು 25 ಮಕ್ಕಳನ್ನು ತಪಾಸಣೆ ನಡೆಸಿ, ಅವರ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪೋಷಕರಿಗೆ ಸಲಹೆ ನೀಡಿದರು.

ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ತೊಂದರೆ ಕಂಡುಬಂದಲ್ಲಿ ಆರಂಭಿಕ ಹಂತದಲ್ಲೇ ತಜ್ಞರಿಂದ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ವೈದ್ಯರು ತಿಳಿಸಿದರು.

ಮುಂದಿನ ಚಿಕಿತ್ಸೆ ಮತ್ತು ಅಗತ್ಯ ಪರೀಕ್ಷೆಗಳಿಗೆ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳಿದ್ದು, ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ಹಾಗೂ ರೋಗನಿರ್ಣಯದ ಸೇವೆ ಪಡೆಯುವ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು.

ನಿಧಿ ಫೌಂಡೇಶನ್‌ನ ಗಾಯಿತ್ರಿ ಕಿರಣ್, ಗೀತಾ ಸವಿತಾ, ಗ್ರಾಮಾಂತರ ಟ್ರಸ್ಟ್‌ನ ಉಷಾ ಎಸ್. ಶೆಟ್ಟಿ ಸೇರಿದಂತೆ ತಂಡದ ಸದಸ್ಯರು ಉಪಸ್ಥಿತರಿದ್ದರು.