ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನದಿಂದ 9200 ಪಶುಗಳಿಗೆ ಚಿಕಿತ್ಸೆ

| Published : Apr 25 2025, 11:46 PM IST

ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನದಿಂದ 9200 ಪಶುಗಳಿಗೆ ಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ 2024-25ರಲ್ಲಿ 9209 ಪಶುಗಳಿಗೆ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ.

ಕಾರವಾರ: ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ 2024-25ರಲ್ಲಿ 9209 ಪಶುಗಳಿಗೆ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ.ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 13 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ ಲಭ್ಯವಿದ್ದು, ರೈತರು ಮತ್ತು ಜಾನುವಾರು ಮಾಲೀಕರು ಉಚಿತ ಟೋಲ್ ಫ್ರೀ ಸಂಖ್ಯೆ 1962 ಗೆ ಕರೆ ಮಾಡುವ ಮೂಲಕ ಉಚಿತವಾಗಿ ಈ ಸೇವೆಯನ್ನು ಪಡೆಯಬಹುದು.

ಉಚಿತ ಟೋಲ್ ಫ್ರೀ ಸಂಖ್ಯೆ 1962ಗೆ 2024-25 ರಲ್ಲಿ, ಅಂಕೋಲಾ ತಾಲೂಕಿನಲ್ಲಿ 539, ಭಟ್ಕಳ 577, ಹಳಿಯಾಳ 904, ದಾಂಡೇಲಿ 430, ಹೊನ್ನಾವರ 488, ಕಾರವಾರ 394, ಕುಮಟಾ 482, ಮುಂಡಗೋಡು 1298, ಸಿದ್ದಾಪುರ 677, ಶಿರಸಿ 1136, ಜೋಯಿಡಾ 524, ಯಲ್ಲಾಪುರ 734, ಪಾಲಿ ಕ್ಲಿನಿಕ್ ಯಲ್ಲಾಪುರದಲ್ಲಿ 1026 ಕರೆಗಳು ಸ್ವೀಕೃತಗೊಂಡಿದ್ದು, ಈ ಎಲ್ಲ ಕರೆಗಳಿಗೆ ಸಂಬಂಧಿಸಿದಂತೆ ಪಶುಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲಾಗಿದೆ.

ರೋಗಗ್ರಸ್ಥ ಜಾನುವಾರುಗಳ ಮಾಲೀಕರು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಸಹಾಯವಾಣಿ ಸಂಖ್ಯೆ 1962 ಗೆ ಕರೆ ಮಾಡಿ, ತಮ್ಮ ಹೆಸರು, ವಿಳಾಸ ಹಾಗೂ ಜಾನುವಾರುಗಳಿಗೆ ಇರುವ ತೊಂದರೆ ಬಗ್ಗೆ ತಿಳಿಸಿದ ನಂತರ ಸಮೀಪದ ಸಂಚಾರಿ ಪಶು ಚಿಕಿತ್ಸಾ ವಾಹನಕ್ಕೆ ಈ ಬಗ್ಗೆ ಮಾಹಿತಿ ರವಾನೆಯಾಗಿ, ಪಶುವೈದ್ಯರು, ಪಶು ವೈದ್ಯ ಸಹಾಯಕರು ಸದರಿ ವಿಳಾಸಕ್ಕೆ ಆಗಮಿಸಿ ಪಶುಗಳಿಗೆ ಉಚಿತ ಚಿಕಿತ್ಸೆ ಹಾಗೂ ಅಗತ್ಯ ಔಷಧಗಳನ್ನು ನೀಡುತ್ತಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಪ್ರತಿ ತಾಲೂಕಿಗೆ ಒಂದರಂತೆ 12 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಮತ್ತು ಯಲ್ಲಾಪುರದಲ್ಲಿರುವ ಪಶು ವೈದ್ಯಕಿಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ಗೆ ಒಂದು ವಾಹನ ಸೇರಿದಂತೆ ಒಟ್ಟು 13 ವಾಹನಗಳಲ್ಲಿ 9 ಪಶುವೈದ್ಯರು ಮತ್ತು 13 ಪಶು ವೈದ್ಯ ಸಹಾಯಕರು ಹಾಗೂ ವಾಹನ ಚಾಲಕರು ಈ ಯೋಜನೆಯಡಿ ಸೇವೆ ಸಲ್ಲಿಸುತ್ತಿದ್ದಾರೆ.

ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 4.10 ಲಕ್ಷ ಹಸು, ಎಮ್ಮೆ ಮುಂತಾದ ಜಾನುವಾರುಗಳಿವೆ. 19,000 ಕುರಿ- ಮೇಕೆಗಳು, 75,000 ನಾಯಿಗಳಿದ್ದು ಸಾಕಷ್ಟು ಸಂಖ್ಯೆಯ ಇತರೆ ಸಾಕು ಪ್ರಾಣಿಗಳಿವೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳಲ್ಲಿ ವೈದ್ಯರು ಮತ್ತು ಸಹಾಯಕರ ಸೇವೆ ಲಭ್ಯವಿರುವುದರಿಂದ ಜಾನುವಾರು ಮಾಲೀಕರು ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆಯ ರೈತರು ಮತ್ತು ಜಾನುವಾರುಗಳ ಮಾಲೀಕರು ಉಚಿತ ದೂರವಾಣಿ ಸಂಖ್ಯೆ 1962ಗೆ ಕರೆ ಮಾಡುವ ಮೂಲಕ ಈ ಸೇವೆ ಪಡೆಯಬಹುದಾಗಿದೆ ಎನ್ನುತ್ತಾರೆ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಕೆ.ಎಂ. ಮೋಹನ್‌ಕುಮಾರ್.