ಸಾಹಿತ್ಯ, ಕಲೆ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ಸಮಾಜ ಸೇವಕ ದಿ.ಡಾ.ಕೆ.ವೈ.ಶ್ರೀನಿವಾಸ್ ಅವರು ತಮ್ಮ 75ನೇ ಹುಟ್ಟುಹಬ್ಬದ ಪ್ರಯುಕ್ತ 75 ಶಾಲೆಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದರು.

ಪಾಂಡವಪುರ: ಶಿಕ್ಷಣವಿಲ್ಲದೇ ಜಗತ್ತಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಧನ್ಯಕುಮಾರ್ ಹೇಳಿದರು.

ತಾಲೂಕಿನ ಗಿರಿಯಾರಹಳ್ಳಿ ಹಾಗೂ ಹರವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ದಿ.ಡಾ.ಕೆ.ವೈ.ಶ್ರೀನಿವಾಸ್ ಸ್ಮರಣಾರ್ಥ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು.

ಸಾಹಿತ್ಯ, ಕಲೆ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ಸಮಾಜ ಸೇವಕ ದಿ.ಡಾ.ಕೆ.ವೈ.ಶ್ರೀನಿವಾಸ್ ಅವರು ತಮ್ಮ 75ನೇ ಹುಟ್ಟುಹಬ್ಬದ ಪ್ರಯುಕ್ತ 75 ಶಾಲೆಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದರು. ಅಂತೆಯೇ ಅವರ ಪುತ್ರ ದಂತ ವೈದ್ಯ ಡಾ.ಕೆ.ಎಸ್.ಅಭಿನಯ್ ಅವರು ಮಕ್ಕಳಿಗೆ ಇಂಗ್ಲಿಷ್ ನಿಘಂಟು ಹಾಗೂ ನೋಟ್ ಬುಕ್, ಲೇಖನ ಸಾಮಗ್ರಿಗಳನ್ನು ನೀಡುವ ಮೂಲಕ ತಂದೆಯ ಆಸೆ ಈಡೇರಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಡಾ.ಕೆ.ವೈ.ಶ್ರೀನಿವಾಸ್ ಅವರು ತಾಲೂಕಿನ ಡಾಮಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆಗೆ ಚಾಲನೆ ನೀಡಿದ್ದರು. ಹುಟ್ಟುಹಬ್ಬದ ಬದಲು ತಾಲೂಕಿನ 75 ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲು ಬಯಸಿದ್ದೇನೆ ಎಂದು ತಿಳಿಸಿದ್ದರು. ಪುತ್ರ ಅಭಿನಯ್ ತಂದೆ ಆಸೆಯಂತೆ 75 ಶಾಲೆಗಳ ಮಕ್ಕಳಿಗೆ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ಕೆ.ಎಸ್.ಅಭಿನಯ್, ಪತ್ರಕರ್ತ ಎನ್.ಕೃಷ್ಣೇಗೌಡ, ಶಿಕ್ಷಕರಾದ ಪಿ.ಕೆ.ಮಹೇಶ್, ಕೆ.ಕಾಂತರಾಜು, ಬಿ.ಎಂ.ರಾಘವೇಂದ್ರ, ಡಿ.ಶಿವಣ್ಣ, ಎಚ್.ಡಿ.ಸ್ವಾಮಿ, ಎಸ್ ಡಿಎಂಸಿ ಅಧ್ಯಕ್ಷ ಲೋಕೇಶ್ ಇತರರಿದ್ದರು.