ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಗಳು ಜನರಿಗೆ ಉಚಿತವಾಗಿ ನೀಡುವ ಯೋಜನೆಗಳಿಂದ ಯಾವುದೇ ದೇಶ ಉಳಿಯುವುದು ಕಷ್ಟ. ಅದಕ್ಕೆ ಒಂದು ಕಾಲದಲ್ಲಿ ಶ್ರೀಮಂತ ದೇಶವಾಗಿದ್ದ ವೆನಿಜುಲಾ ಸಾಕ್ಷಿಯಾಗಿದೆ ಎಂದು ನಿವೃತ್ತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಹೇಳಿದರು.ನಗರದ ವಿವೇಕಾನಂದ ರಂಗಮಂದಿರದಲ್ಲಿ ಡಾ.ಡಿ.ಶ್ರೀನಿವಾಸ್ ಅಭಿನಂದನಾ ಸಮಿತಿ, ಕರ್ನಾಟಕ ಸಂಘದಿಂದ ನಿವೃತ್ತ ಪ್ರಾಂಶುಪಾಲ ಡಾ.ಡಿ.ಶ್ರೀನಿವಾಸ್- ೮೫ ಸ್ನೇಹಶೀಲ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ವೆನಿಜುಲಾ ದೇಶದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಜನರಿಗೆ ಉಚಿತ ಕೊಡುಗೆ ನೀಡಿ ಶ್ರೀಮಂತ ದೇಶವನ್ನು ಭಿಕ್ಷುಕ ದೇಶವನ್ನಾಗಿ ಮಾಡಿದರು. ಜನರಲ್ಲಿ ದುಡಿಯುವ ಮನೋಭಾವ ಬೆಳೆಸದೆ ಉಚಿತ ಯೋಜನೆಗಳನ್ನು ಕೊಟ್ಟರೆ ಯಾವ ದೇಶಕ್ಕೂ ಉಳಿಗಾಲವಿರುವುದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ದೇಶ, ರಾಜ್ಯ, ರಾಜಕೀಯ ಪಕ್ಷಗಳು ಯಾವ ಹಾದಿಯಲ್ಲಿ ಸಾಗುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮುಂದೆ ನಮ್ಮ ದೇಶಕ್ಕೆ ವೆನಿಜುಲಾ ಸ್ಥಿತಿ ಬರಬಾರದು ಎನ್ನುವುದು ನಮ್ಮ ಆಶಯವಾಗಿದೆ ಎಂದರು.ನಮ್ಮಲ್ಲಿ ಮೇಧಾವಿಗಳು, ಪರಿಣಿತರು, ವಿದ್ಯಾವಂತರೆನಿಸಿಕೊಂಡವರು ಇದ್ದರೂ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ದೇಶ, ರಾಜ್ಯ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಒಳ್ಳೆಯವರು ಇಂತಹ ವಿಷಯಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ದೇಶದ ಭವಿಷ್ಯ ಉಜ್ವಲವಾಗುವುದು ಬಹಳ ಕಷ್ಟವಾಗಲಿದೆ. ಆರ್ಥಿಕವಾಗಿ ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ವಿಜ್ಞಾನ-ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಜನರ ಪರಿಸ್ಥಿತಿ ಹದಗೆಡುತ್ತಿದೆ. ದುಷ್ಟ ವ್ಯಕ್ತಿತ್ವ, ಕೆಟ್ಟತನ, ಜಾತಿ ವೈಷಮ್ಯ ವೇಗವಾಗಿ ಹರಡುತ್ತಿದೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಪ್ರಸ್ತುತ ವ್ಯವಸ್ಥೆಯೊಳಗೆ ಓದುಗರಿಲ್ಲ, ಒಳ್ಳೆಯ ಶಿಕ್ಷಕರಿಲ್ಲ, ಒಳ್ಳೆಯ ವಿದ್ಯಾರ್ಥಿಗಳು ಹೊರಬರುತ್ತಿಲ್ಲ. ನಾಲ್ಕು ಗೋಡೆಗಳ ನಡುವೆ ಕಲಿಯುವುದಷ್ಟೇ ಶಿಕ್ಷಣವಲ್ಲ. ಪದವಿ ಗಳಿಸಿ ಹೊರಬರುವ ವಿದ್ಯಾಥಿಗಳಿಗೆ ಲೋಕ ಎರಡಾಗಿ ಕಾಣುತ್ತದೆ. ಲೋಕದ ಸಮಸ್ಯೆಗಳನ್ನು ಬಗೆಹರಿಸುವುದನ್ನು ಹೇಳಿಕೊಡಬೇಕು. ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸುವ ಅವಶ್ಯಕತೆ ಇದೆ ಎಂದರು.ಸಮಾಜಕ್ಕೆ ಒಳ್ಳೆಯದನ್ನು ಬಯಸುವವರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಜನರು ಔದಾರ್ಯಗಳಿಗೆ ತೆರೆದುಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು, ಸಮಾಜದ ಪ್ರಗತಿಗೆ ಶ್ರಮಿಸಿದವರ ಪುಸ್ತಕಗಳನ್ನು ಓದಬೇಕು. ಒಳ್ಳೆಯವರ ಜೀವನ, ಸಾಧನೆಗಳು ಪುಸ್ತಕಗಳಲ್ಲಿ ದಾಖಲಾಗಬೇಕು. ಅಲ್ಲಿ ವ್ಯಕ್ತಿ ನಿಮಿತ್ತ ಮಾತ್ರ. ಆದರೆ, ಆ ವ್ಯಕ್ತಿಯ ಬಗ್ಗೆ ದಾಖಲಾಗುವ ಮಾಹಿತಿ, ಗೆಳೆಯರ ಅನಿಸಿಕೆ-ಅಭಿಪ್ರಾಯಗಳು, ಸಾಧನೆಗಳೆಲ್ಲವೂ ನೈಜ ಸಂಗತಿಗಳಾಗಿರುತ್ತವೆ. ಅವರ ಜೀವನ ಮಾರ್ಗದರ್ಶನವಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ.ಬಿ.ಜಯಪ್ರಕಾಶಗೌಡ, ಅಭಿನಂದನಾ ಸಮಿತಿಯ ಅಧ್ಯಕ್ಷ ಜಿ.ವಿ. ನಾಗರಾಜು, ಉಪಾಧ್ಯಕ್ಷ ಎಂ.ಬಾಲಕೃಷ್ಣ ಹಾಗೂ ಕೆ.ಎಸ್.ಬಸವರಾಜು, ಕಾರ್ಯದರ್ಶಿ ಕೆ.ಬಿ. ಬಾಲಕೃಷ್ಣ (ಇಂಚರ ಬಾಲು), ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ, ನಿವೃತ್ತ ಪ್ರಾಂಶುಪಾಲ ಪ್ರೊ .ಕೆ.ಎಂ.ನಾಗರಾಜು, ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಡಾ.ಡಿ.ಶ್ರೀನಿವಾಸ್ ಅಭಿನಂದನಾ ಸಮಿತಿಯ ಸದಸ್ಯರು ಹಾಜರಿದ್ದರು.