ಸಾರಾಂಶ
ರೇಬಿಸ್ ರೋಗ ಹರಡುವಿಕೆಯನ್ನು ತಡೆಗಟ್ಟಲು ಲಸಿಕೆ ಹಾಕಲಾಗುವುದು. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಶಿಲ್ಪಶ್ರೀ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ರೇಬಿಸ್ ರೋಗ ಹರಡುವಿಕೆಯನ್ನು ತಡೆಗಟ್ಟಲು ಲಸಿಕೆ ಹಾಕಲಾಗುವುದು. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ನಾಪೋಕ್ಲು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಶಿಲ್ಪಶ್ರೀ ಹೇಳಿದರು.ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನೆ ಇಲಾಖೆ ಮಡಿಕೇರಿ ಹಾಗೂ ಪಶು ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಸಮೀಪದ ಬೇತು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ ರೇಬಿಸ್ ಲಸಿಕೆ ಹಾಗೂ ಪಶು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಬೇತು ಗ್ರಾಮದ ಊರ್ ಮಂದ್ ನಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ಗ್ರಾಮ ಪಂಚಾಯಿತಿ ಸದಸ್ಯ ಸಾಬ ತಿಮ್ಮಯ್ಯ ಉದ್ಘಾಟಿಸಿದರು. ಶಿಬಿರದಲ್ಲಿ ಬಂಜೆ ರಾಸುಗಳ ತಪಾಸಣೆ, ಹೋರಿ ಮತ್ತು ರಾಸುಗಳ ಕಸಿ, ಜಂತು ನಾಶಕ ಔಷಧಿ, ಲವಣ ಮಿಶ್ರಣ, ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕಿ ಸಲಹೆ ಸೂಚನೆ ಹಾಗೂ ಮಾರ್ಗದರ್ಶನವನ್ನು ಮಾಡಲಾಯಿತು.ಮಡಿಕೇರಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ, ನಾಪೋಕ್ಲು ಪಶು ಆಸ್ಪತ್ರೆಯ ಜಾನುವಾರು ಅಧಿಕಾರಿ ನವೀನ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಸುನಿಲ್, ಪಶು ಸಖಿ ನಿಷಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.