ಕಂಪ್ಲಿ: ಮಹಿಳೆಯರು, ಯುವ ಸಮುದಾಯದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಕೇರಳ ಸ್ಟೋರಿ-2’ ಚಿತ್ರದ ಉಚಿತ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸಿ ಅದರಲ್ಲಿರುವ ಸಂದೇಶವನ್ನು ಅರ್ಥೈಸಿಕೊಳ್ಳಬೇಕು ಎಂದು ಕಂಪ್ಲಿ ಯುವಶಕ್ತಿ ಸಂಘದ ಅಧ್ಯಕ್ಷ ಎನ್.ಎಂ. ಪತ್ರಯ್ಯಸ್ವಾಮಿ ತಿಳಿಸಿದರು.ಪಟ್ಟಣದ ಅತಿಥಿಗೃಹ ಆವರಣದಲ್ಲಿ ಶುಕ್ರವಾರ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಮಾನವ ಕಳ್ಳ ಸಾಗಾಣಿಕೆ, ಧಾರ್ಮಿಕ ಅತಿರೇಕ, ಮಹಿಳೆಯರ ಶೋಷಣೆ ಹಾಗೂ ಉಗ್ರಗಾಮಿ ಸಂಘಟನೆಗಳ ನೇಮಕಾತಿಯಂತಹ ಗಂಭೀರ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಚಿತ್ರ ನಿರ್ಮಾಣಗೊಂಡಿದೆ. ಪ್ರೀತಿ, ವಿವಾಹ ಅಥವಾ ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ವಂಚಿಸುವ ಘಟನೆಗಳ ಕುರಿತು ಸಮಾಜದಲ್ಲಿ ಎಚ್ಚರಿಕೆ ಮೂಡಿಸುವ ಸಂದೇಶವನ್ನು ಈ ಚಿತ್ರ ಒಳಗೊಂಡಿದೆ ಎಂದು ಹೇಳಿದರು.

ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಯುವಕರು, ಪೋಷಕರು ಹಾಗೂ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಚಿತ್ರ ವೀಕ್ಷಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಂಪ್ಲಿ ಯುವಶಕ್ತಿ ಸಂಘದ ಪದಾಧಿಕಾರಿಗಳು, ಗೆಳೆಯರ ಬಳಗದ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಪ್ರತಿದಿನ ನಾಲ್ಕು ಉಚಿತ ಪ್ರದರ್ಶನ:


ಕಂಪ್ಲಿ ಯುವಶಕ್ತಿ ಸಂಘ, ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ಜು.24ರಿಂದ 30ರವರೆಗೆ ಸತತ ಏಳು ದಿನಗಳ ಕಾಲ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಪ್ರತಿದಿನ ನಾಲ್ಕು ಪ್ರದರ್ಶನಗಳು ನಡೆಯಲಿವೆ. ಬೆಳಿಗ್ಗೆ 11 ಗಂಟೆ, ಮಧ್ಯಾಹ್ನ 2 ಗಂಟೆ, ಸಂಜೆ 5.30 ಗಂಟೆ ಹಾಗೂ ರಾತ್ರಿ 8.30 ಗಂಟೆಗೆ ಪ್ರದರ್ಶನ ಇರಲಿದೆ ಎಂದು ಕಂಪ್ಲಿ ಯುವಶಕ್ತಿ ಸಂಘದ ಅಧ್ಯಕ್ಷ ಎನ್.ಎಂ. ಪತ್ರಯ್ಯಸ್ವಾಮಿ ಮಾಹಿತಿ ನೀಡಿದರು.