ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ

| Published : Apr 18 2025, 12:46 AM IST

ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

15 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡಲಾಗುತ್ತಿದೆ.

ಕಾರವಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲೆಯ ಗ್ರಾಪಂ ಅರಿವು ಕೇಂದ್ರದಲ್ಲಿ ಗ್ರಾಪಂ ನೇತೃತ್ವದಲ್ಲಿ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.15 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಓದುವ, ಬರೆಯುವ, ಅಂಕಿ ಸಂಖ್ಯೆ ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಸಹ ಈ ಬೇಸಿಗೆ ಶಿಬಿರದ ಆಶಯವಾಗಿರುತ್ತದೆ.

ಶಿಬಿರದಲ್ಲಿ ಮಕ್ಕಳ ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುವುದು, ಚಿತ್ರ ಬರೆಯುವಿಕೆ (ಕಾರ್ಡ್) ಕಥೆ ಕಟ್ಟುವಿಕೆ, ಗಟ್ಟಿ ಮಾಡುವುದು, ಭಾಷಣ ಮಾಡುವುದು ಸೇರಿದಂತೆ ಬರೆಯುವ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಿಸುವ ಚಟುವಟಿಕೆಗಳು, ಅಂಕಿ ಸಂಖ್ಯೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಟ್ಯಾನ್‌ಗ್ರಾಮ್. ಪೇಪರ್ ಫ್ಯಾನ್, ಜೆಟ್ ಪ್ಲೇನ್, ಕಣ್ಣು ಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರೆ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಗೂ ಭೇಟಿ ನೀಡಲಾಗುತ್ತದೆ. ಗ್ರಾಪಂ ವ್ಯಾಪ್ತಿಯ 8 ರಿಂದ 13 ವರ್ಷದೊಳಗಿನ 40 ಮಕ್ಕಳು ಭಾಗವಹಿಸಬಹುದಾಗಿದ್ದು, ಸ್ಥಳೀಯ ತಾಪಮಾನ ಆಧರಿಸಿ ಶಿಬಿರದ ಸಮಯವನ್ನು 3 ಗಂಟೆಗಳ ಅವಧಿಗೆ ನಿಗದಿಪಡಿಸಲಾಗಿದೆ.

ಬೇಸಿಗೆ ಶಿಬಿರದ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ, ಅಂಕಿ-ಸಂಖ್ಯೆ ಮತ್ತು ವಿಜ್ಞಾನ ವಿಷಯಗಳು, ನೈತಿಕತೆ ಮತ್ತು ನಾಯಕತ್ವ ವಿಷಯಗಳು ಮತ್ತು ಕಾರ್ಯ ಯೋಜನೆಗಳನ್ನು ರೂಪಿಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿ, ಗ್ರಾಮೀಣ ಪ್ರದೇಶದ ಮಕ್ಕಳನ್ನು ಸಮಾಜದ ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡುವ ಸದುದ್ದೇಶವನ್ನು ಹೊಂದಲಾಗಿದೆ.