ಸಾರಾಂಶ
ಹುಬ್ಬಳ್ಳಿ ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದ ಎಜಿಎಂ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ವರೂರು ತೀರ್ಥಕ್ಷೇತ್ರದಲ್ಲಿ ಮೇ 6ರಿಂದ 16ರ ವರೆಗೆ ಸರ್ವಧರ್ಮದ ಬಡ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಹುಬ್ಬಳ್ಳಿ: ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದ ಎಜಿಎಂ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ವರೂರು ತೀರ್ಥಕ್ಷೇತ್ರದಲ್ಲಿ ಮೇ 6ರಿಂದ 16ರ ವರೆಗೆ ಸರ್ವಧರ್ಮದ ಬಡ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 11 ದಿನಗಳ ಕಾಲ ನಡೆಯುವ ಈ ಬೇಸಿಗೆ ಶಿಬಿರದಲ್ಲಿ 6 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ 5 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ 68 ಶಿಕ್ಷಕರು, ತರಬೇತುದಾರರು ಮಾರ್ಗದರ್ಶನ ನೀಡಲಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ, ಉಪಾಹಾರ, ವಸತಿ ಜತೆಗೆ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.ಶಿಬಿರದಲ್ಲಿ ಮಕ್ಕಳಿಗೆ ಯೋಗ, ಕರಾಟೆ, ಆರ್ಟ್ ಆ್ಯಂಡ್ ಕ್ರಾಫ್ಟ್, ಕ್ಲೇ ಮಾಡಲಿಂಗ್, ಸ್ವಿಮ್ಮಿಂಗ್, ಸೈಕ್ಲಿಂಗ್, ಕುಸ್ತಿ, ಕುದುರೆ ಸವಾರಿ, ಜಂಬೂ ಸವಾರಿ, ಗಾಂಧಾರ ವಿದ್ಯೆ, ಸಂಗೀತ-ನೃತ್ಯ, ವಿಶೇಷ ಬೋಧನೆ, ಪೇಂಟಿಂಗ್ ಸೇರಿದಂತೆ ಅನೇಕ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಅದರಂತೆ ಮೇ 4ರಂದು ಮಧ್ಯಾಹ್ನ 2 ಗಂಟೆಗೆ ಎಜಿಎಂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗದ ಹಳೆಯ ವಿದ್ಯಾರ್ಥಿಗಳಿಗೆ ಗ್ಲೋಬಲ್ ಅಲ್ಯೂಮಿನಿಯಂ ಮೀಟ್ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ 10 ಬ್ಯಾಚ್‌ನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1ರಿಂದ 10ನೇ ತರಗತಿ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಪ್ರವೇಶಕ್ಕೆ ಮೇ 12ಕ್ಕೆ ಪ್ರವೇಶ ಪರೀಕ್ಷೆ ನಡೆಯಲಿದೆ. ಅದರಲ್ಲಿ ಉತ್ತೀರ್ಣರಾದವರಿಗೆ ಉಚಿತ ಪ್ರವೇಶ ನೀಡಲಾಗುವುದು. ತಂದೆ, ತಾಯಿ ಇಲ್ಲದ ಎಲ್ಲ ಧರ್ಮದವರಿಗೆ, ಯಾವುದೇ ತರಗತಿಗೆ ಸಿಬಿಎಸ್ಇ ಪಠ್ಯಕ್ರಮದಲ್ಲಿ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ. 8884746462, 8105796521, 8660745390 ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ತಿಳಿಸಿದರು.