ಮಂಡ್ಯ ಜಿಲ್ಲೆಯ 17.77 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ

| Published : Oct 24 2025, 01:00 AM IST

ಮಂಡ್ಯ ಜಿಲ್ಲೆಯ 17.77 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಪರ ಕೆಲಸ ಮಾಡುತ್ತಿದೆ. ಎನ್.ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾದ ನಂತರ ರಾಜ್ಯದ ರೈತರಿಗೆ ಸಮರ್ಪಕ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಿಸುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೊಜನೆಯಲ್ಲಿ ಮಂಡ್ಯ ಜಿಲ್ಲೆ ಒಂದರಲ್ಲಿಯೇ ಮಹಿಳೆಯರು 472 ಕೋಟಿ ರು. ಮೌಲ್ಯದ 17.77 ಕೋಟಿ ಟಿಕೆಟ್ ಪಡೆದು ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಗುರುವಾರ ಭೇಟಿಕೊಟ್ಟು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 22 ತಿಂಗಳು ಜಿಲ್ಲೆಯ 4.65 ಲಕ್ಷ ಮಹಿಳೆಯರ ಬ್ಯಾಂಕ್ ಉಳಿತಾಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ಹಣ ಸೇರಿದೆ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಪರ ಕೆಲಸ ಮಾಡುತ್ತಿದೆ. ಎನ್.ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾದ ನಂತರ ರಾಜ್ಯದ ರೈತರಿಗೆ ಸಮರ್ಪಕ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಿಸುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ ಎಂದರು.

ಎಂಡಿಸಿಸಿ ಬ್ಯಾಂಕ್ ವತಿಯಿಂದ ಕಳೆದ ಸಾಲಿನಲ್ಲಿ ಜಿಲ್ಲೆಯ 1.05 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1144 ಕೋಟಿ ರು. ಸಾಲ ವಿತರಿಸಲಾಗಿತ್ತು. ಈ ಬಾರಿ ಸಚಿವರ ನಿರ್ದೇಶನದಂತೆ ಸುಮಾರು 42ಸಾವಿರ ರೈತರಿಗೆ 400 ಕೋಟಿ ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ ಎಂದರು.

ಈ ಬಾರಿ ಉತ್ತಮ ಮುಂಗಾರಿನಿಂದ ಜಿಲ್ಲೆಯ 1.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ರಾಗಿ, ಕಬ್ಬು ಸೇರಿದಂತೆ ಇನ್ನಿತರೆ ದ್ವಿದಳ ಧಾನ್ಯ ಬೆಳೆಗಳ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಸರ್ಕಾರದ ಗುರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಮಾಡಿದ್ದಾರೆ ಎಂದರು.

ಜಿಲ್ಲೆಗೆ ಅವಶ್ಯಕತೆಯಿದ್ದ 78 ಸಾವಿರ ಮೆಟ್ರಕ್ ಟನ್ ರಸಗೊಬ್ಬರದ ಜೊತೆಗೆ ಹೆಚ್ಚುವರಿಯಾಗಿ 26 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರವನ್ನು ಉಗ್ರಾಣದಲ್ಲಿ ದಾಸ್ತಾನು ಮಾಡಿ ಯಾವುದೇ ಕೊರತೆಯಾಗದಂತೆ ಜಿಲ್ಲಾ ಮಂತ್ರಿಗಳು ಕ್ರಮವಹಿಸಿದ್ದಾರೆ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎನ್.ಕೆ.ವಸಂತಮಣಿ, ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಮುಖಂಡರಾದ ಕನ್ನಾಘಟ್ಟ ವೆಂಕಟೇಶ್, ಶರತ್‌ರಾಮಣ್ಣ, ಡಿ.ಕೃಷ್ಣೇಗೌಡ, ನೀಲಾಮೂರ್ತಿ, ತಿಬ್ಬನಹಳ್ಳಿ ರಮೇಶ್, ತ್ಯಾಪೇನಹಳ್ಳಿ ಶ್ರೀನಿವಾಸ್, ಸಂಪತ್‌ಕುಮಾರ್, ರವಿಕಾಂತೇಗೌಡ ಸೇರಿದಂತೆ ಹಲವರು ಇದ್ದರು.