ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನೀರಿನ ಸಮಸ್ಯೆ ಇರುವ ಕಡೆ 200ರಿಂದ 300 ಟ್ಯಾಂಕರ್ ಬಳಸಿ ಉಚಿತವಾಗಿ ನೀರಿನ ಪೂರೈಕೆ ಮಾಡಲು ಬಿಬಿಎಂಪಿ, ಜಲ ಮಂಡಳಿ ನಿರ್ಧರಿಸಿದೆ. ಈ ಟ್ಯಾಂಕರ್‌ಗಳನ್ನು ಖಾಸಗಿ ವ್ಯಕ್ತಿಗಳಿಂದ ವಶಕ್ಕೆಪಡೆಯಲು ತೀರ್ಮಾನಿಸಿದೆ.ನಗರದಲ್ಲಿ ನೀರಿನ ಸಮಸ್ಯೆ ಕುರಿತು ಶನಿವಾರ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಕೇಂದ್ರ ವಲಯದಲ್ಲಿ ನೀರಿನ ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಜಲ ಮಂಡಳಿ ನಿರ್ವಹಿಸಲಿದ್ದು, ಹೊರ ವಲಯದ 110 ಹಳ್ಳಿ ವ್ಯಾಪ್ತಿಯಲ್ಲಿ ಮಾತ್ರ ಬಿಬಿಎಂಪಿ ನಿರ್ವಹಣೆ ಮಾಡಲಿದೆ. ಸದ್ಯ ನಗರಕ್ಕೆ ಪ್ರತಿ ದಿನ 1450 ದಶಲಕ್ಷ ಲೀಟರ್ ಪಂಪ್ ಮಾಡುವುದಕ್ಕೆ ಅವಕಾಶವಿದೆ. ಆದರೆ, ಹೆಚ್ಚುವರಿ ಪಂಪ್ ಬಳಕೆ ಮಾಡಿಕೊಂಡು 1,472 ಎಂಎಲ್‌ಡಿ ನೀರು ಪೂರೈಕೆ ಮಾಡುತ್ತಿದೆ. ಖಾಸಗಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾವೇರಿ ನೀರಿನ ಪೂರೈಕೆ ಇಲ್ಲದ ಕಡೆ ನೀರಿನ ಸಮಸ್ಯೆ ಆಗುತ್ತಿದೆ. ಅದಕ್ಕಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.200 ಟ್ಯಾಂಕರ್ ವಶಕ್ಕೆ:
ಖಾಸಗಿ ವ್ಯಕ್ತಿಗಳಿಂದ ಪಡೆಯುವ 200 ಟ್ಯಾಂಕರ್ ಪೈಕಿ 100 ಟ್ಯಾಂಕರ್‌ಗಳನ್ನು 110 ಹಳ್ಳಿಗಳಿಗೆ, ಉಳಿದ 100 ಟ್ಯಾಂಕರ್‌ಗಳನ್ನು ಕೇಂದ್ರ ಭಾಗದ ವಲಯಗಳ ನೀರಿನ ಸಮಸ್ಯೆ ಇರುವ ಕಡೆ ಪೂರೈಕೆಗೆ ಬಳಕೆ ಮಾಡಲಾಗುವುದು. ಜತೆಗೆ ಜಲ ಮಂಡಳಿಯ 68 ಟ್ಯಾಂಕರ್‌ಗಳನ್ನು ಬಳಕೆ ಮಾಡಲಾಗುವುದು ಎಂದು ತುಷಾರ್ ವಿವರಿಸಿದರು.ಅಗತ್ಯ ಬಿದ್ದರೆ ಎಲ್ಲಾ ಟ್ಯಾಂಕರ್ ವಶಕ್ಕೆ:
ನಗರದಲ್ಲಿ ಸುಮಾರು 3 ಸಾವಿರ ಟ್ಯಾಂಕರ್‌ಗಳಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಎಲ್ಲ ಟ್ಯಾಂಕರ್‌ಗಳನ್ನು ವಿಪತ್ತು ನಿರ್ವಹಣೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗುವುದು. ಖಾಸಗಿ ಟ್ಯಾಂಕರ್ ದರ ನಿಗದಿಗೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಂದ ಅತ್ಯಧಿಕ ಪ್ರಮಾಣ ಹಣ ವಸೂಲಿ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗಲಿದೆ ಎಂದು ತುಷಾರ್ ಎಚ್ಚರಿಕೆ ನೀಡಿದರು.58 ಕಡೆ ನೀರಿನ ಸಮಸ್ಯೆಸದ್ಯ ನಗರದಲ್ಲಿ 58 ಕಡೆ ನೀರಿನ ಸಮಸ್ಯೆಯಿದ್ದು, ಈ ಪೈಕಿ ಮಹದೇವಪುರ 16, ಆರ್.ಆರ್.ನಗರ 25, ಬೊಮ್ಮನಹಲ್ಳಿ 5 ಕಡೆ, ಯಲಹಂಕ ಹಾಗೂ ದಾಸರಹಳ್ಳಿ ತಲಾ 3 ಕಡೆ ನೀರಿನ ಅಭಾವ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾದರೆ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ.ನೀರಿಗಾಗಿ ₹131 ಕೋಟಿ
ನೀರಿನ ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರೆಯುವುದಕ್ಕೆ ₹90 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ವೆಚ್ಚದಲ್ಲಿ ಸುಮಾರು ಒಂದು ಸಾವಿರ ಕೊಳವೆ ಬಾವಿ ಕೊರೆಯಬಹುದಾಗಿದೆ. ಭೂಗರ್ಭ ಶಾಸ್ತ್ರಜ್ಞ ತಾಂತ್ರಿಕ ಅಭಿಪ್ರಾಯ ಪಡೆದು ಕೊರೆಯಲಾಗುವುದು. ಉಳಿದ ಹಣವನ್ನು ಇನ್ನುಳಿದ ಕಾರ್ಯಗಳಿಗೆ ಬಳಕೆ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.ಇದಲ್ಲದೇ, ಉಪ ಮುಖ್ಯಮಂತ್ರಿಗಳ ವಿವೇಚನೆಯಲ್ಲಿ ಮೀಸಲಿಟ್ಟ ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ನೀಡಲಾಗಿದೆ. ಆ ಹಣವನ್ನೂ ಬಳಕೆ ಮಾಡಿಕೊಂಡು ಕೊಳವೆ ಬಾವಿ ಕೊರೆಯಲಾಗುವುದು. ಜಲ ಮಂಡಳಿಯು ನೀರಿನ ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರೆಯುವುದಕ್ಕೆ ₹20 ಕೋಟಿ ಮೀಸಲಿಟ್ಟಿದ್ದು, ಅಗತ್ಯಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಜಲಮಂಡಳಿ ಅಧಿಕಾರಿ ಬಿಬಿಎಂಪಿಗೆ ಅಧೀನಕ್ಕೆ
ನೀರಿನ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ 110 ಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಿಯೋಜನೆ ಮಾಡಿರುವ ಜಲ ಮಂಡಳಿಯ ಅಧಿಕಾರಿ ಸಿಬ್ಬಂದಿಯನ್ನು ಒಂದು ವಾರದಲ್ಲಿ ಬಿಬಿಎಂಪಿಯ ಆಯಾ ವಲಯ ಆಯುಕ್ತರ ಅಧೀನಕ್ಕೆ ನೀಡಲಾಗುವುದು. ನೀರಿನ ಸಮಸ್ಯೆ ಬಂದರೆ ಆಯಾ ವಲಯ ಆಯುಕ್ತರು ನಿರ್ದೇಶನದಂತೆ ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಲಿದೆ ಎಂದು ತಿಳಿಸಿದರು.ಹಲವು ಕಡೆ ಆರ್‌ಒ ಘಟಕ ಸ್ಥಗಿತ
ಆರ್.ಆರ್.ನಗರ ವಲಯದ ವ್ಯಾಪ್ತಿಯಲ್ಲಿ 35, ಮಹದೇವಪುರದಲ್ಲಿ 22 ಹಾಗೂ ಪೂರ್ವ ವಲಯದಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಆರ್‌ಒ ಫ್ಲಾಂಟ್‌ಗಳಿಗೆ ನೀರಿನ ವ್ಯವಸ್ಥೆ ಮಾಡುವವರೆಗೆ ತಾತ್ಕಾಲಿಕವಾಗಿ ನೀರಿನ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ₹9 ಕೋಟಿ ನೀಡಲಾಗಿದೆ ಎಂದು ತುಷಾರ್ ತಿಳಿಸಿದರು.1,214 ಬೋರ್‌ವೆಲ್ ಖಾಲಿಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 1,472 ಎಂ.ಎಲ್.ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿಯಿಂದ ಜುಲೈವರೆಗೆ ಅಂದಾಜು 9.48 ಟಿಎಂಸಿ ನೀರು ಅವಶ್ಯಕತೆಯಿದೆ. ನಗರದಲ್ಲಿ ಜಲಮಂಡಳಿಯಿಂದ 10.84 ಲಕ್ಷ ನೀರಿನ ಸಂಪರ್ಕ ಹೊಂದಿವೆ. ನಗರದಲ್ಲಿ 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿದ್ದು, 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಸಂಬಂಧ ಸರಿಪಡಿಸಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಅಂತಹವುಗಳನ್ನು ಫ್ಲಷಿಂಗ್ ಹಾಗೂ ಮರು ಕೊರೆಯುವುದಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.ಮೇ ತಿಂಗಳಿಂದ ಹೆಚ್ಚುವರಿ ನೀರು
ಏಪ್ರಿಲ್ ಅಂತ್ಯ ಹಾಗೂ ಮೇ ಮೊದಲ ವಾರದಲ್ಲಿ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಆರಂಭಗೊಳ್ಳಲಿದೆ. ಆಗ ಹೆಚ್ಚುವರಿ 772 ಎಂಎಲ್‌ಡಿ ಹೆಚ್ಚುವರಿ ನೀರು ನಗರಕ್ಕೆ ಲಭ್ಯವಾಗಲಿದೆ. ಆ ನೀರನ್ನು 110 ಹಳ್ಳಿ ವ್ಯಾಪ್ತಿಗೆ ಪೂರೈಕೆ ಮಾಡಲಾಗುವುದು ಎಂದು ಪ್ರಸಾತ್ ತಿಳಿಸಿದರು.ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ। ಕೆ.ಹರೀಶ್ ಕುಮಾರ್, ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಪಾಲಿಕೆ/ಜಲಮಂಡಳಿ ಅಧಿಕಾರಿಗಳು ಇದ್ದರು.---ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂಬುದನ್ನು ಪಟ್ಟಿ ಮಾಡಿಕೊಂಡು ಅಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನೀರಿನ ಅಭಾವ ಹೆಚ್ಚಿರುವ ಕಡೆ ಜಲಮಂಡಳಿ ಅಧಿಕಾರಿಗಳ ಜತೆಗೆ ಸಮನ್ವಯ ಮಾಡಿಕೊಂಡು ನಾಗರಿಕರಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು.-ರಾಕೇಶ್ ಸಿಂಗ್, ಆಡಳಿತಾಧಿಕಾರಿ, ಬಿಬಿಎಂಪಿ.