ಹೊಸಪೇಟೆ: ದೇವದಾಸಿ ಮಹಿಳೆಯರು, ಅವರ ಮಕ್ಕಳು ಹಾಗೂ ಮೊಮ್ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ವಿಶೇಷ ಕಾನೂನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ-ಕರ್ನಾಟಕ ಸಂಘಟನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಶಿಕ್ಷಣದ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಹಾಗೂ ಸರ್ಕಾರದ ವಸತಿ ಶಾಲೆಗಳಲ್ಲಿ ದೇವದಾಸಿ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ವಿಶೇಷ ಮೀಸಲಾತಿ ಹಾಗೂ ಪ್ರವೇಶಾತಿ ನೀಡಬೇಕು. ಓದಿದ ದೇವದಾಸಿ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಸರ್ಕಾರದ ನೇಮಕಾತಿಗಳಲ್ಲಿ ವಿಶೇಷ ಮೀಸಲಾತಿಯನ್ನು ಕಲ್ಪಿಸಿ, ಕಾನೂನಾತ್ಮಕ ಭದ್ರತೆ ಒದಗಿಸಬೇಕು ಎಂದರು.

2025ರ ಸರ್ವೆಯಲ್ಲಿ ನಮೂನೆ-1, 2 ಮತ್ತು 3ರ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ವಯಸ್ಸಿನ ಮಿತಿಯಿಲ್ಲದೇ ಸರಿಯಾಗಿ ಮರುಪರಿಶೀಲಿಸಿ ''''''''ರಿ-ಎಂಟ್ರಿ'''''''' ಮಾಡಬೇಕು. ಬಾಕಿ ಉಳಿದವರಿಗಾಗಿ ಮತ್ತೊಮ್ಮೆ ಲಾಗಿನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದರು.

ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದ್ದರೂ ಪ್ರಾಯೋಗಿಕವಾಗಿ ಈ ಪಿಡುಗು ಸಂಪೂರ್ಣವಾಗಿ ನಿಂತಿಲ್ಲ. ದೇವದಾಸಿ ಕುಟುಂಬಗಳ ತಾಯಿ, ಮಕ್ಕಳು ಹಾಗೂ ಮೊಮ್ಮಕ್ಕಳು ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಿಂದ ವಂಚಿತರಾಗಿರುವುದು, ದೇವರ-ಧರ್ಮದ ಭಯ ಹಾಗೂ ಅತಿಯಾದ ಮೂಢನಂಬಿಕೆ, ನಿರಂತರವಾಗಿ ಕಾಡುತ್ತಿರುವ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು, ಸ್ವಜಾತಿಯ ಹಾಗೂ ಇತರ ಜಾತಿ-ಧರ್ಮಗಳ ಕೆಲವು ಪುರುಷರಿಂದ ನಡೆಯುತ್ತಿರುವ ಲೈಂಗಿಕ ದಬ್ಬಾಳಿಕೆಗಳೇ ಇದಕ್ಕೆಲ್ಲ ಕಾರಣ. ಈ ಸಾಮಾಜಿಕ ಅನಿಷ್ಠದಿಂದಾಗಿ ಇಂದಿಗೂ ಕೆಲ ಜಾತಿಗಳ ಮಹಿಳೆಯರು ದೇವದಾಸಿ ಪದ್ಧತಿಗೆ ಬಲಿಯಾಗುತ್ತಿದ್ದಾರೆ ಎಂದರು.

ಕಾನೂನು ತಜ್ಞರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ವಿಶೇಷ ಅಧಿಕಾರಿಗಳನ್ನೊಳಗೊಂಡ ಸಮಿತಿಯ ಮೂಲಕ ಈ ಸಮಸ್ಯೆಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿ, ನಿರ್ದಿಷ್ಟ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.


ವೇದಿಕೆಯ ಸಿದ್ದಗಂಗಮ್ಮ, ಹುಲಿಗೆಮ್ಮ, ಲಕ್ಷ್ಮಿ ಸೇರಿದಂತೆ ಅನೇಕ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ, ಮೊಮ್ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.