ಸ್ವಾತಂತ್ರ್ಯ, ಸಮಾನತೆ ಸಂವಿಧಾನದ ಸದಾಶಯ: ಪ್ರೊ. ಅಶೋಕ ಆಲೂರ

| Published : Mar 03 2024, 01:30 AM IST

ಸಾರಾಂಶ

ಸ್ವಾತಂತ್ರ್ಯ ಮತ್ತು ಸಮಾನತೆಯ ವ್ಯವಸ್ಥೆ ದೊರಕಬೇಕು ಎಂಬುದು ದೇಶದ ಸಂವಿಧಾನದ ಸದಾಶಯವಾಗಿದೆ

ಕನ್ನಡಪ್ರಭ ವಾರ್ತೆ ಕುಶಾಲನಗರ

ಭಾರತಕ್ಕೆ ಸ್ವಾತಂತ್ರ್. ಬಂದ ನಂತರ ವರ್ಣ ರಹಿತ, ವರ್ಗ ರಹಿತ ಹಾಗೂ ಜಾತಿ ರಹಿತ ನಾಡಾಗಬೇಕು. ಆ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಮತ್ತು ಸಮಾನತೆಯ ವ್ಯವಸ್ಥೆ ದೊರಕಬೇಕು ಎಂಬುದು ದೇಶದ ಸಂವಿಧಾನದ ಸದಾಶಯವಾಗಿದೆ ಎಂದು ಕೊಡಗು ವಿ.ವಿ.ಕುಲಪತಿ ಪ್ರೊ. ಅಶೋಕ ಸಂ. ಆಲೂರ ಅಭಿಪ್ರಾಯಪಟ್ಟರು. ಕುಶಾಲನಗರ ತಾಲೂಕಿನ ಚಿಕ್ಕಅಳುವಾರದ ಜ್ಞಾನಕಾವೇರಿ ಆವರಣದಲ್ಲಿ ಜಿಲ್ಲಾಡಳಿತ, ಕೊಡಗು ಜಿಲ್ಲೆ, ಸಮಾಜಕಲ್ಯಾಣ ಇಲಾಖೆ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾನತೆ ಎಂಬುದು ಭಾರತೀಯರ ಹಲವಾರು ಶತಮಾನಗಳ ಕನಸಾಗಿತ್ತು. ಕ್ರಿ.ಶ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಆಂದೋಲನಗಳು ಮತ್ತು ಚಿಂತನೆಗಳು ದೇಶದ ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಹೊಂದಿವೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿವೆ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ವಿಶ್ವದ ಎಲ್ಲ ಸಂವಿಧಾನಗಳನ್ನು ಓದಿ ಅರ್ಥೈಸಿಕೊಂಡು ಅದರಲ್ಲಿನ ಮಾನವೀಯ ಮೌಲ್ಯದ ವಿಚಾರಗಳನ್ನು ದೇಶದ ಸಂವಿಧಾನದಲ್ಲಿ ಅಳವಡಿಸಿಕೊಂಡು ಜಾರಿಗೆ ತಂದರು. ಭಾರತೀಯ ಸಂವಿಧಾನದ ಮೂಲಾಧಾರವಾಗಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ವ್ಯಕ್ತಿತ್ವದ ವೈಭವೀಕರಣಕ್ಕಿಂತ ಸಾಮಾಜೀಕರಣ ಮುಖ್ಯವಾಗಬೇಕು. ಸಮಾನತೆಯ ಚಿಂತನೆಗಳು ಆಚರಣೆಗೆ ಬಂದಾಗ ಮಾತ್ರವೇ ನಾವೆಲ್ಲರೂ ಮನುಷ್ಯರಾಗಿ ಬಾಳುವುದಕ್ಕೆ ಮತ್ತು ಸಂವಿಧಾನದ ಮೌಲ್ಯಗಳನ್ನು ಸಾಕಾರಗೊಳಿಸಲು ಸಾಧ್ಯ. ದೇಶದಲ್ಲಿ ಜಾತಿ, ಜನಾಂಗ, ಧರ್ಮ, ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬ ಆಶಯವನ್ನು ಸಂವಿಧಾನ ಹೊಂದಿದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಮಾತನಾಡಿ, ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲೊಂದಾಗಿರುವ ಭಾರತೀಯ ಸಂವಿಧಾನವು ವಿಚಾರಪರವಾದ ವಿಶ್ವಶಾಂತಿ ಮತ್ತು ಸಮಸಮಾಜದ ಪರಿಕಲ್ಪನೆ ಹೊಂದಿದೆ. ಭಾರತವನ್ನು ಕಲ್ಯಾಣ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವಲ್ಲಿ, ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ಎತ್ತಿಹಿಡಿಯುವಲ್ಲಿ ಮತ್ತು ರಕ್ಷಿಸುವಲ್ಲಿ ಭಾರತದ ಸಂವಿಧಾನದ ಪಾತ್ರವು ಮಹತ್ವದ್ದಾಗಿದೆ ಎಂದು ತಿಳಿಸಿದರು ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿ ಮಧು ಎಚ್‌.ಎಸ್., ಪ್ರಕಾಶ್, ವಿವಿಧ ವಿಭಾಗಗಳ ಉಪನ್ಯಾಸಕರು, ಆಡಳಿತ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ವಿನು ಸ್ವಾಗತಿಸಿದರು. ಸುದರ್ಶನ್ ಕುಮಾರ್ ವಂದಿಸಿದರು ಹಾಗೂ ಡಾ. ಜಮೀರ್ ಅಹಮದ್ ನಿರೂಪಿಸಿದರು. ಕೊಡಗು ವಿಶ್ವವಿದ್ಯಾಲಯದ ಪ್ರವೇಶ ದ್ವಾರದಿಂದ ಸಂವಿಧಾನ ಜಾಗೃತಿ ಜಾಥಾ ರಥದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌, ಜಗಜ್ಯೋತಿ ಬಸವಣ್ಣ, ಬುದ್ಧ ಮತ್ತು ಕೊಡಗಿನ ಕಾವೇರಿ ಮಾತೆ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಕೋರಲಾಯಿತು. ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ನೂರಾರು ವಿದ್ಯಾರ್ಥಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ಜ್ಞಾನಕಾವೇರಿ ಆವರಣಕ್ಕೆ ಜಾಥಾ ಬರಮಾಡಿಕೊಂಡರು.