ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ವಿಧಾನಸೌಧ ಮುಂದೆ ನಡೆಸಲಿರುವ ‘ಫ್ರೀಡಂ ಹಬ್ಬ’ದ ಮೂಲಕ ರಾಜ್ಯ ಸರ್ಕಾರ ಕೇವಲ ಜೆನ್‌ಜಿ ಸಮುದಾಯಗಳನ್ನು ಸೆಳೆಯಲು ಮುಂದಾಗಿದೆಯೇ ಹೊರತು ಸಾಮಾನ್ಯ, ದುಡಿಯುವ ವರ್ಗವನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನವಿಡೀ ನಡೆಯುವ ವೈವಿಧ್ಯಮಯ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ಸಜ್ಜು ಮಾಡಲಾಗಿದೆ. ಆದರೆ, ಪ್ರವೇಶಾತಿಗೆ ಕ್ಯೂ ಆರ್‌ ಕೋಡ್‌ ಕಡ್ಡಾಯ ಮಾಡಿರುವುದಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಬ್ಬದ ಕುರಿತಂತೆ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಕೃಷ್ಣ ಬೈರೇಗೌಡ ಅವರು, ಬೆಂಗಳೂರಿನಲ್ಲಿ ವಾಸವಿರುವ ರಾಜ್ಯದ ಬೇರೆ ಜಿಲ್ಲೆ ಹಾಗೂ ಅನ್ಯರಾಜ್ಯದ ಜನರಿಗಾಗಿ ಈ ಹಬ್ಬ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಮಕ್ಕಳೇ ಪಾಸ್‌. ಬೆಂಗಳೂರಿನ ಕಾರ್ಮಿಕ ವರ್ಗ ಹಾಗೂ ವಿವಿಧ ರಾಜ್ಯ ವಿವಿಧ ಜಿಲ್ಲೆಯ ಜನರು ನಗರದಲ್ಲಿ ವಾಸವಿರುವವರಿಗೆ ಈ ಫ್ರೀಡಂ ಹಬ್ಬ ಆಚರಿಸಲಾಗುತ್ತಿದೆ. ಇಲ್ಲಿ ಮಕ್ಕಳೇ ಪಾಸ್ ಇದ್ದಂತೆ, ಸಾಮಾನ್ಯ ಜನರು ಕೇವಲ ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿ ತಂದರೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ, ಜಿಬಿಎ ಆಯುಕ್ತ ಮಹೇಶ್ವರರಾವ್ ಹಾಗೂ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈಗ ಕ್ಯೂ ಆರ್ ಕೋಡ್ ಮೂಲಕ ನೋಂದಣಿಯಾದವರಿಗೆ ಮಾತ್ರ ಪ್ರವೇಶ ಎಂದು ಹೇಳುತ್ತಿರುವುದು ಶ್ರೀ ಸಾಮಾನ್ಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ಯೂ ಆರ್‌ ಕೋಡ್‌ ಮೂಲಕ ನೋಂದಣಿ ಮಾಡಲು ಸಾವಿರಾರು ಜನರು ಪ್ರಯತ್ನಿಸಿ ವಿಫಲರಾಗಿದ್ದಾರೆ. ನೋಂದಣಿ ಮುಗಿದಿದೆ ಎಂಬ ಸಂದೇಶ ಕಂಡು ಬರುತ್ತಿದೆ ಎಂದು ಅನೇಕರು ದೂರಿದ್ದಾರೆ.