ಕಾರ್ಯಕ್ರಮದಲ್ಲಿ ಕೆ.ಆರ್.ನಗರದ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ತಾಲೂಕಿನ ಬೆಡದಹಳ್ಳಿ ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಕೆ.ಆರ್.ಪೇಟೆ: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣರ ರಾಷ್ಟ್ರಪ್ರೇಮ, ಜೀವನದ ಆದರ್ಶ ಹಾಗೂ ಹೋರಾಟ ಮನೋಭಾವನೆಯು ಇಂದಿನ ಯುವ ಜನರಿಗೆ ದಾರಿ ದೀಪವಾಗಿವೆ ಎಂದು ಆರ್ ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಆದಿಹಳ್ಳಿಯಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಲೋಕಾರ್ಪಣೆ ಹಾಗೂ ಹಾಲುಮತ ಕುರುಬ ಸಮಾಜದ ಆರಾಧ್ಯದೈವ ಶ್ರೀ ಚಿಕ್ಕಯ್ಯನವರ ನೂತನ ದೇವಾಲಯದ ಲೋಕಾರ್ಪಣೆಯಲ್ಲಿ ಮಾತನಾಡಿದರು.

ಕಿತ್ತೂರ ರಾಣಿ ಚೆನ್ನಮ್ಮಳ ನಿಷ್ಠಾವಂತ ಸೇವಕನಾಗಿ, ಅಪ್ರತಿಮ ದೇಶಭಕ್ತನಾಗಿ ಬ್ರಿಟಿಷರನ್ನು ಭಾರತ ದೇಶದಿಂದ ಓಡಿಸಲು ಗೆರಿಲ್ಲಾ ಮಾದರಿ ಹೋರಾಟ ನಡೆಸಿದ ಸಂಗೊಳ್ಳಿ ರಾಯಣ್ಣ ಅವರು ಗೆಲುವು ಸಾಧಿಸುವ ಹೊಸ್ತಿಲಿನಲ್ಲಿದ್ದಾಗ ಬ್ರಿಟಿಷರ ಕುತಂತ್ರಕ್ಕೆ ಒಳಗಾಗಿ ನೇಣಿಗೆ ಶರಣಾದರು ಎಂದರು.

ಕಷ್ಟಪಟ್ಟು ಜೀವನ ನಡೆಸಿ ಗುರಿ ಸಾಧನೆ ಮಾಡಬೇಕು, ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಕೂಡ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗವನ್ನು ಎಂದಿಗೂ ಬಿಡಬಾರದು ಎಂಬುದಕ್ಕೆ ರಾಯಣ್ಣನೇ ನಮಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದಾನೆ ಎಂದು ಹೇಳಿದರು.

ಗ್ರಾಮಸ್ಥರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ದೇವಾಲಯಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿಸುವ ಮೂಲಕ ನಾಗರಿಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ನಗರದ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ತಾಲೂಕಿನ ಬೆಡದಹಳ್ಳಿ ಪಂಚಭೂತೇಶ್ವರ ಮಠದ ರುದ್ರಮುನಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಚ್.ಟಿ.ಮಂಜು, ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ. ಪ್ರಕಾಶ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಮನ್ಮುಲ್ ನಿರ್ದೇಶಕ ಡಾಲು ರವಿ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೊಡಗಹಳ್ಳಿ ವಿ.ಮಂಜೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.