ಸಾರಾಂಶ
ಗದಗ: ಮನುಷ್ಯನಲ್ಲಿ ಆತ್ಮಸ್ಥೈರ್ಯ, ಧೈರ್ಯ, ಸಕಾರಾತ್ಮಕ ಚಿಂತನೆಗಳಿದ್ದರೆ ಮಾತ್ರ ರೋಗಗಳಿಂದ ಮುಕ್ತಿ ಹೊಂದಲು ಸಾಧ್ಯ. ಆತ್ಮಬಲದಿಂದ ಎಲ್ಲವೂ ಸಾಧ್ಯವಿದೆ. ಪರಿಹಾರವಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2732ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸರಿಯಾದ ಆಹಾರ ಪದ್ಧತಿ ಅನುಸರಿಸುವದರಿಂದ ಮನುಷ್ಯ ಆರೋಗ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಾದಾಗ ಅನಾರೋಗ್ಯ ಕಾಡುತ್ತವೆ ಎಂದರು.ಶರಣರ ವಚನಗಳಲ್ಲಿ ಮನುಷ್ಯನ ಆಹಾರ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕಿರಿದು ಮಾಡಿರಣ್ಣ ಆಹಾರವ, ಕಿರಿದು ಮಾಡಿರಣ್ಣ ಎಂಬ ವಚನ ಆಹಾರ ಪದ್ಧತಿಯ ಮಹತ್ವ ತಿಳಿಸಿಕೊಡುತ್ತದೆ. ಕ್ಯಾನ್ಸರ್ ರೋಗ ಮಾರಕವಾದ ರೋಗ. 150 ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ಪೂರ್ಣಪ್ರಮಾಣದಲ್ಲಿ ಔಷಧಿ ಸಿಕ್ಕಿಲ್ಲ. ದುಶ್ಚಟಗಳಿಂದ ದೂರವಿದ್ದು, ಯೋಗ ಪ್ರಾಣಾಯಾಮಗಳಿಂದ ಆರೋಗ್ಯ ಕಾಯ್ದುಕೊಳ್ಳಬೇಕು. ಒತ್ತಡ ರಹಿತ ಜೀವನ ನಮ್ಮದಾಗಬೇಕು ಎಂದರು.
ಸ್ಪರ್ಶ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಧನೇಶ ದೇಸಾಯಿ ಮಾತನಾಡಿ, ಕ್ಯಾನ್ಸರ್ ರೋಗ ಬಹಳ ಅಪಾಯಕಾರಿ. ಅದು ಏಡಿ ಇದ್ದಂತೆ. ಹಿಡಿದರೆ ಬಿಡುವುದಿಲ್ಲ. ಭಾರತದಲ್ಲಿ 15 ಲಕ್ಷ ಜನರು ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಕ್ಯಾನ್ಸರ್ ರೋಗ ದೇಹದ ಯಾವುದೇ ಭಾಗದಲ್ಲಿ ಬರಬಹುದು. ಇದು ಒಂದು ಕಡೆ ಬಂದರೆ ದೇಹವನ್ನೆಲ್ಲ ವ್ಯಾಪಿಸಿ ಬಿಡುತ್ತದೆ. ತಂಬಾಕು ಸೇವನೆಯಿಂದ ತುಟಿಗೆ ಬರುತ್ತದೆ. ಅಲ್ಕೋಹಾಲ್‌ನಿಂದ ಲೀವರ್ ಕ್ಯಾನ್ಸರ್ ಬರುತ್ತದೆ. ಎ.ಸಿ ಉಪಯೋಗಿಸುವುದರಿಂದ ಬಹುಲೈಂಗಿಕ ಕ್ರಿಯೆ,ಫ್ಯಾಕ್ಟರಿ, ಬಾಹ್ಯ ಮತ್ತು ಆಂತರಿಕ ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು. ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮ ಕ್ಯಾನ್ಸರ್ ಹೀಗೆ ಅನೇಕ ಪ್ರಕಾರದ ಕ್ಯಾನ್ಸರ್ ಬಗ್ಗೆ ತಿಳಿಸಿ ಲಕ್ಷಣ ಮತ್ತು ಪರಿಹಾರಗಳ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು.ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಹಾಡಿದರು. ಧರ್ಮಗ್ರಂಥ ಪಠಣವನ್ನು ಐಶ್ವರ್ಯ ವಿ. ಕವಿಶೆಟ್ಟಿ, ವಚನ ಚಿಂತನವನ್ನು ಖುಷಿ ಎಂ.ಲಕ್ಕುಂಡಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ದಿ.ಮಹಾಂತಪ್ಪ ಬಡ್ನಿ ಸ್ಮರಣಾರ್ಥ ಪುಷ್ಪಲತಾ ಮಹಾಂತಪ್ಪ ಬಡ್ನಿ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.
ಮುರುಗೇಶ್ ಬಡ್ನಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಉಪಸ್ಥಿತರಿದ್ದರು. ಸಮಿತಿಯ ಚೆರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಡಾ. ಉಮೇಶ ಪುರದ ಪರಿಚಯಿಸಿದರು. ಅಶೋಕ ಹಾದಿ ನಿರೂಪಿಸಿದರು.