ಬಾಳೆಹೊನ್ನೂರುಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಬಲಿದಾನ ಮಾಡಿ ಅಮೂಲ್ಯವಾದ ಸ್ವಾತಂತ್ರ್ಯದೊರಕಿಸಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ. ಜವಾಬ್ದಾರಿಯಿಂದ ಬಾಳಿ ಬದುಕಲು ಕೊಟ್ಟಂತಹ ಅವಕಾಶ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
-ರಂಭಾಪುರಿ ಪೀಠದ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾಮೀಜಿ ಅಭಿಮತ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಬಲಿದಾನ ಮಾಡಿ ಅಮೂಲ್ಯವಾದ ಸ್ವಾತಂತ್ರ್ಯದೊರಕಿಸಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ. ಜವಾಬ್ದಾರಿಯಿಂದ ಬಾಳಿ ಬದುಕಲು ಕೊಟ್ಟಂತಹ ಅವಕಾಶ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು. ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿದ ನಂತರ ಭಾರತ ರಾಷ್ಟ್ರ ಸರ್ವಾಂಗೀಣ ಪ್ರಗತಿ ಸಾಧಿಸುತ್ತ ಬಂದಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮಾಡಿರುವುದನ್ನು ಕಾಣುತ್ತೇವೆ. ದೇಶವಾಸಿಗಳಲ್ಲಿ, ಬೆಳೆಯುವ ವಿದ್ಯಾರ್ಥಿಗಳಲ್ಲಿ ಒಂದು ರಾಷ್ಟ್ರದ ಸ್ವಾಭಿಮಾನ ಇಂದು ಹೆಚ್ಚು ಬೆಳೆದುಕೊಂಡು ಬರಬೇಕಾದ ಅವಶ್ಯಕತೆಯಿದೆ.ದೇಶ ನನ್ನದು, ನಾಡು ನನ್ನದು ಎನ್ನುವ ಭಾವನೆ ಮೂಡಬೇಕಾಗಿದೆ. ಸ್ವಾಭಿಮಾನದ ಕೊರತೆಯಿಂದ ಹಲವು ರಂಗಗಳಲ್ಲಿ ಕೆಲವು ಸಮಸ್ಯೆ ಎದುರಿಸುತ್ತಿದ್ದೇವೆ ಅವೆಲ್ಲವೂ ದೂರವಾಗಿ ಜಾತ್ಯಾತೀತ, ಪಕ್ಷಾತೀತವಾಗಿ ಸದೃಢ, ಸುಭದ್ರ ರಾಷ್ಟ್ರ ಕಟ್ಟುವಂತಹ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಬೆಳೆಯುವಂತಹ ಯುವ ಜನಾಂಗಕ್ಕೆ ಪ್ರಧಾನಿ ನರೇಂದ್ರ ಮೋದಿರು ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷ ಕೊಡುಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಯುವಶಕ್ತಿ ರಾಷ್ಟ್ರದ ಅಮೂಲ್ಯ ಸಂಪತ್ತು. ನಮ್ಮ ಅತ್ಯಮೂಲ್ಯ ಆಸ್ತಿ. ಯಾವ ಮಕ್ಕಳಲ್ಲಿ ಯಾವ ಪ್ರತಿಭೆಯಿದೆ ಎನ್ನುವುದು ಗೊತ್ತಿಲ್ಲ ಅಂತಹ ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.
ಈ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯ್ ಪಟೇಲ್, ದಾದಾ ಬಾಯ್ ನೌರೋಜಿ, ಬಾಲಗಂಗಾಧರ ತಿಲಕ್, ನೆಹರು, ಸರೋಜಿನಿ ನಾಯ್ಡ್, ಭಗತ್ ಸಿಂಗ್ ಸೇರಿದಂತೆ ಹಲವರು ತಮ್ಮ ಪ್ರಾಣವನ್ನು ತೆತ್ತು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ಪ್ರಮುಖರ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ದೇಶ ಕ್ಕಾಗಿ ಸ್ವಾತಂತ್ರ್ಯದ ಅಭಿಮಾನಕ್ಕಾಗಿ ಹೋರಾಡಿದ ರಾಷ್ಟ್ರ ಭಕ್ತರನ್ನು ಸಹ ಮರೆಯಲು ಸಾಧ್ಯವಿಲ್ಲ. ಅವರೆಲ್ಲರ ಶ್ರಮದ ಬೆವರಿನ ಫಲವಾಗಿ ಭಾರತ ಇಂದು ಸ್ವಾತಂತ್ರ್ಯಗೊಂಡು ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ.ಭವಿಷ್ಯತ್ತಿನಲ್ಲಿ ಹೆಚ್ಚಿನ ಆಶೋತ್ತರ ಇಟ್ಟುಕೊಂಡು ದೇಶ ಕಟ್ಟುವಂತಹ ಮನಸ್ಸುಗಳನ್ನು ಜೋಡಿಸುವಂತಹ ಕೆಲಸ ನಡೆಯ ಬೇಕು ಎಂಬ ಅಪೇಕ್ಷೆ ನಾವು ಹೊಂದಿದ್ದೇವೆ. ದೇಶದಲ್ಲಿ ಸಾಮರಸ್ಯ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಗಟ್ಟಿಯಾದ ಹೆಜ್ಜೆಯನ್ನು ಇಡಬೇಕಿದೆ ಎಂದರು.
ಅಂಬಾಜೋಗಾಯಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿ, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿ, ಬಿ.ಕಣಬೂರು ಗ್ರಾಪಂ ಮಾಜಿ ಸದಸ್ಯರಾದ ಬಿ.ಜಗದೀಶ್ಚಂದ್ರ, ಎಂ.ಜೆ.ಮಹೇಶ್ ಆಚಾರ್ಯ, ಕೋಕಿಲಮ್ಮ, ಮುಖ್ಯಶಿಕ್ಷಕ ವೀರೇಶ ಕುಲಕರ್ಣಿ, ಕಟ್ಟೇಗೌಡ ಮತ್ತಿತರರು ಹಾಜರಿದ್ದರು.೧೫ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ರಂಭಾಪುರಿ ಪೀಠದ ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಲ್ಲಿ ಡಾ.ವೀರಸೋಮೇಶ್ವರ ಜಗದ್ಗುರು ಗಳು ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಖಾ ಮಠದ ಶಿವಾಚಾರ್ಯರು ಹಾಜರಿದ್ದರು.