ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ಜಾರಿ ಮಾಡಲು ಹೊರಟಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದೆ. ಈ ಮೂಲಕ ಅಂಬೇಡ್ಕರ್ ರೂಪಿತ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದೆ ಎಂದು ಬಿಜೆಪಿ ಮುಖಂಡ ಡಾ.ಎಚ್.ಇ.ಜ್ಞಾನೇಶ್ ಕಿಡಿಕಾರಿದರು.
ಸೊರಬ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ಜಾರಿ ಮಾಡಲು ಹೊರಟಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದೆ. ಈ ಮೂಲಕ ಅಂಬೇಡ್ಕರ್ ರೂಪಿತ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದೆ ಎಂದು ಬಿಜೆಪಿ ಮುಖಂಡ ಡಾ.ಎಚ್.ಇ.ಜ್ಞಾನೇಶ್ ಕಿಡಿಕಾರಿದರು.ಮಂಗಳವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿಯಿಂದ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ-೨೦೨೫ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ವರ್ಗಕ್ಕೆ ಸೀಮಿತವಾಗಿ ಓಲೈಕೆ ರಾಜಕಾರಣಕ್ಕೆ ಅಂಟಿಕೊಂಡು ಅರಾಜಕತೆ ಸೃಷ್ಟಿಸುತ್ತಿರುವುದರ ಜತೆಗೆ ವಿಪಕ್ಷಗಳ ಧ್ವನಿ ಅಡಗಿಸುವ ಹುನ್ನಾರ ನಡೆಸಿದೆ. ಇದಕ್ಕೆ ಬಿಜೆಪಿ ಹೆದರಿ ಹಿಂದೆ ಸರಿಯುವುದಿಲ್ಲ. ಬದಲಾಗಿ ಖಂಡಿಸುತ್ತೇವೆ. ಸರ್ಕಾರ ಪ್ರತಿಬಂಧಕ ಕಾಯ್ಕೆ ಹಿಂದೆ ಪಡೆಯುವವರೆಗೂ ಹೋರಾಟ ನಡೆಯುತ್ತದೆ ಎಂದು ಎಚ್ಚರಿಸಿದರು.ನಕಲಿ ಗಾಂಧಿಗಳಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಲ್ಲದ ಆರೋಪಗಳು ಕೇಳಿ ಬರುತ್ತಿವೆ. ಆದರೆ ನರೇಂದ್ರ ಮೋದಿ ಅವರು ಎಲ್ಲರನ್ನೂ ಸಮಾನವಾಗಿ ಕಾಣುವಂತೆ ಹೇಳುತ್ತಾರೆ. ಕಾಂಗ್ರೆಸ್‌ನವರು ಮಾತ್ರ ದ್ವೇಷದ ರಾಜಕಾರಣಕ್ಕೆ ಪುಷ್ಠಿ ನೀಡುವುದರ ಜತೆಗೆ ಓಟಿಗಾಗಿ ಓಲೈಕೆ ರಾಜಕಾರಣಕ್ಕೆ ಇಳಿದಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ವಾತಾವರಣ ವೈಪರೀತ್ಯ ಮತ್ತು ಕಳಪೆ ಬಿತ್ತನೆ ಬೀಜ ವಿತರಣೆಯಿಂದ ಸಂಭವಿಸಿರುವ ಬೆಳೆ ನಷ್ಟದಿಂದ ತಾಲೂಕಿನ ರೈತ ಸಮೂಹ ಯಾತನೆ ಪಡುತ್ತಿದ್ದರೂ ಇತ್ತ ಗಮನ ಹರಿಸದೇ ಮುಖ್ಯಮಂತ್ರಿ ಕುರ್ಚಿ ಕಚ್ಚಾಟದಲ್ಲಿ ತಲ್ಲೀನರಾಗಿದ್ದಾರೆ ಎಂದರು.ಮಾಚಿದೇವ ಮಡಿವಾಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ.ತಲ್ಲೂರು ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಒಂದು ಕೋಮಿನ ಓಲೈಕೆಗಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ. ಭಾರತೀಯ ನ್ಯಾಯ ಸಂಹಿತೆ ಕಲಂ ೧೯೫ ಮತ್ತು ೨೯೮ರಂತೆ ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಬಲವಾದ ಕಾನೂನು ಜಾರಿಯಾಗಿದ್ದರೂ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಕ್ರಮ ಕಾಂಗ್ರೆಸ್‌ನ ನೀತಿಗೇಡಿತನವನ್ನು ಪ್ರಚುರಪಡಿಸಿದೆ. ಆದ್ದರಿಂದ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಇದಕ್ಕೂ ಮೊದಲು ಪಟ್ಟಣದ ಪುರಸಭೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಆಗಸನಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಹೊಳಿಯಮ್ಮ, ಮಾಜಿ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪುರಸಭಾ ಮಾಜಿ ಸದಸ್ಯರಾದ ಮಧುರಾಯ ಜಿ.ಶೇಟ್, ನಟರಾಜ್ ಉಪ್ಪಿನ, ಮುಖಂಡರಾದ ವಿಜಯಗೌಡ್ರು, ಗಜಾನನರಾವ್, ನಿರಂಜನ ದೊಡ್ಮನೆ, ಗುರುಪ್ರಸನ್ನಗೌಡ, ವೈ.ಜಿ.ಗುರುಮೂರ್ತಿ, ಯಶೋಧರ, ವಿನಾಯಕ ಬುಳ್ಳಿ, ಡಿ.ಶಿವಯೋಗಿ, ಬಸವರಾಜ, ಸುಧೀರ್ ಪೈ ಮೊದಲಾದವರು ಹಾಜರಿದ್ದರು.