ಸಾರಾಂಶ
ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಕೂಡಿರುವಂಥ ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕ ಹಾಗೂ ವಿಶ್ವಕ್ಕೆ ಮಾದರಿಯಾಗಿದ್ದು, ಇದನ್ನು ಯುವ ಜನಾಂಗ ಅರಿತುಕೊಳ್ಳಲಿ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು
ಕನ್ನಡಪ್ರಭ ವಾರ್ತೆ, ಬೀದರ್
ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಕೂಡಿರುವಂಥ ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕ ಹಾಗೂ ವಿಶ್ವಕ್ಕೆ ಮಾದರಿಯಾಗಿದ್ದು, ಇದನ್ನು ಯುವ ಜನಾಂಗ ಅರಿತುಕೊಳ್ಳಲಿ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.ಅವರು ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅನೇಕ ಹೋರಾಟಗಳು, ಚಳವಳಿಗಳು, ಸತ್ಯಾಗ್ರಹಗಳು ನಡೆದವು. ಸಿಪಾಯಿ, ಮಂದಗಾಮಿ, ತೀವ್ರಗಾಮಿ ಹಾಗೂ ಕ್ರಾಂತಿಕಾರಿಗಳು ಹೋರಾಟದ ಪ್ರತಿಫಲವಾಗಿ ನಮಗೆ ಸ್ವಾತಂತ್ರ‍್ಯ ದೊರಕಿದೆ. ಸ್ವಾತಂತ್ರ‍್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ದೇಶ ಎಂದಿಗೂ ಮರೆಯಲಾರದು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸದ ಸಾಗರ ಈಶ್ವರ ಖಂಡ್ರೆ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣ, ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿರೀಶ್ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ, ಡಿಎಫ್‌ಒ ಆಶೀಶ ರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.