ಸ್ವಾತಂತ್ರ್ಯ ಇಂದು ಸ್ವೇಚ್ಛಾಚಾರ: ಅರವಿಂದ್‌ ಬೇಸರ

| Published : Aug 16 2024, 12:56 AM IST

ಸಾರಾಂಶ

ಸ್ವಾತಂತ್ರ್ಯ ಚಳವಳಿಯಲ್ಲಿ ಸುಮಾರು 6.70 ಲಕ್ಷ ಜನರ ಬಲಿದಾನವಾಗಿದೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಮುಡಿಪಿಟ್ಟು ಹೋರಾಡಿದ್ದಾರೆ, ಅವರ ತ್ಯಾಗದ ಫಲ ಇಂದು ನಾವು ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ಆದರೆ, ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಇಂದು ಸ್ವೇಚ್ಛಾಚಾರವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೊರಕಿರುವ ಸ್ವಾತಂತ್ರ್ಯದ ಮಹತ್ವವನ್ನು ಯುವಕರು ಅರಿತು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಮುಂದಾಗುವಂತೆ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಸಲಹೆ ನೀಡಿದರು.

ನಗರದಲ್ಲಿರುವ ಸೇವಾಕಿರಣ ವೃದ್ಧಾಶ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕದಿಂದ ೭೮ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಯೋವೃದ್ಧರಿಗೆ ಪೌಷ್ಟಿಕಾಹಾರ-ಸಿಹಿ-ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಸುಮಾರು 6.70 ಲಕ್ಷ ಜನರ ಬಲಿದಾನವಾಗಿದೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಮುಡಿಪಿಟ್ಟು ಹೋರಾಡಿದ್ದಾರೆ, ಅವರ ತ್ಯಾಗದ ಫಲ ಇಂದು ನಾವು ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ಆದರೆ, ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಇಂದು ಸ್ವೇಚ್ಛಾಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವ್ಯಾಪರಕ್ಕೆ ಬಂದ ಬ್ರಿಟೀಷರು ದೇಶವನ್ನೇ ಆಕ್ರಮಿಸಿಕೊಂಡರು. ೨೦೦ ವರ್ಷಗಳ ಕಾಲ ದೇಶವನ್ನು ಆಳಿ, ಕೊಳ್ಳೆಹೊಡೆದು ಹೋದರು, ಆದರೂ ಭಾರತದೇಶ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ವಿಶ್ವಗುರುವಾಗಿ ಪ್ರಜ್ವಲಿಸುವಲ್ಲಿ ಮುನ್ನಡೆದಿದೆ ಎಂದರು.

ವಯೋವೃದ್ಧರೊಂದಿಗೆ ಸ್ವಾತಂತ್ರ್ಯ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದೇವೆ. ಹಿರಿಯರ ತ್ಯಾಗ ಮತ್ತು ಸಹಕಾರದಿಂದ ಸಮಾಜ ಪ್ರಗತಿಯತ್ತ ಸಾಗುತ್ತಿದೆ. ಅಂತಹ ಹಿರಿಯ ಚೇತನಗಳನ್ನು ದೂರವಿಟ್ಟಿರುವ ಮನಸ್ಥಿತಿ ಸರಿಯಲ್ಲ ಎಂದರು.

ವಕೀಲ ಎಂ.ಗುರುಪ್ರಸಾದ್ ಮಾತನಾಡಿ, ಈ ಆಶ್ರಮದಲ್ಲಿ ೧೯೪೭ಕ್ಕೂ ಹಿಂದೆಯೇ ಜನ್ಮತಾಳಿದ ಚೇತನಗಳಿದ್ದೀರಿ, ಅಂದಿನ ದಿನಮಾನಕ್ಕೂ ಇಂದಿನ ದಿನಮಾನಕ್ಕೂ ಸಾಕಷ್ಟು ವ್ಯತ್ಯಾಸಗಳನ್ನು ಕಂಡಿದ್ದೀರಿ. ಇಂತಹವರ ನಡುವೆ ಇಂದು ನಾವು ೭೮ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿ ಸಂಭ್ರಮಿಸುತ್ತಿದೇವೆ ಎಂದರು.

ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಅಧ್ಯಕ್ಷ ಪೋತೇರ ಮಹದೇವು, ವೈದ್ಯ ಡಾ.ಎಚ್.ಸಿ.ಆನಂದ್, ಕಸಾಪ ನಗರಾಧ್ಯಕ್ಷೆ ಸಿ.ಜೆ.ಸುಜಾತಕೃಷ್ಣ, ವಿದುಷಿ ಪ್ರಜ್ವಲಾ, ನಗರಸಭೆ ಮಾಜಿ ಸದಸ್ಯೆ ಪದ್ಮಾ, ಪರಿಸರಪ್ರೇಮಿ ಸಾಲುಮರ ನಾಗರಾಜು, ಪಾಂ.ನಾರಾಯಣ ಮತ್ತಿತರರಿದ್ದರು.