ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ್ಗೆ ಜೋರು ಮಳೆ: ಅಪಾರ ಹಾನಿ

| Published : Aug 21 2024, 12:41 AM IST

ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ್ಗೆ ಜೋರು ಮಳೆ: ಅಪಾರ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಕರೆ ಕೋಡಿ ಒಡೆದು ನೀರು ನುಗ್ಗಿದ್ದ ಮನೆಗಳಿಗೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್‌, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್‌ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಆಗಾಗ್ಗೆ ಜೋರು ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಕರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿದೆ, ಜಮೀನು ಜಲಾವೃತಗೊಂಡಿವೆ.

ಭಾರಿ ಮಳೆಗೆ ಶಿವಮೊಗ್ಗದ ಅಬ್ಬಲಗೆರೆ ಕೆರೆ ಕೋಡಿ ಬಿದ್ದು, ಜಲಪಾತ ಸೃಷ್ಟಿಯಾಗಿದೆ. ಶಿವಮೊಗ್ಗ–ಶಿಕಾರಿಪುರ ಹೆದ್ದಾರಿ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇನ್ನು, ಬಸವನಗಂಗೂರು ಸರ್ಕಾರಿ ಶಾಲೆ ಜಲಾವೃತವಾಗಿತ್ತು. ನೀರು ನುಗ್ಗುತ್ತಿದ್ದಂತೆ ಶಿಕ್ಷಕರು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು. ಕೊಠಡಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಶಿಕ್ಷಕರು ಹರಸಾಹಸಪಟ್ಟರು.

ಶಿವಮೊಗ್ಗ ತಾಲೂಕಿನ ಆಯನೂರು, ಕಾಚಿಕೊಪ್ಪ ಸೇರಿದಂತೆ ವಿವಿಧೆ ಜೋರು ಮಳೆಯಾಗಿದೆ. ಈ ಭಾಗದಲ್ಲಿ ವಿವಿಧೆಡೆ ಜಮೀನಿಗೆ ನೀರು ನುಗ್ಗಿದೆ. ಭತ್ತ, ಶುಂಠಿ ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಬೇಳೂರು ಆಪ್ತ ಕಾರ್ಯದರ್ಶಿ ಭೇಟಿ:

ಆನಂದಪುರ ಸಮೀಪದ ಮುಂಬಾಳು ಹಾಗೂ ಸೂಳಗೊಡು ಭಾಗದಲ್ಲಿನ ಕಿರು ಸೇತುವೆ, ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ ಭೇಟಿ ನೀಡಿ ನಂತರ ಮಾತನಾಡಿ, ಸೋಮವಾರ ಸುರಿದ ಅಕಾಲಿಕ ಮಳೆಯಿಂದ ಮುಂಬಾಳು, ಸುಳೂಗೋಡು, ಜೆಡಿಸರ , ತಾವರೆಹಳ್ಳಿ, ಅಡೂರು ಈ ಭಾಗದಲ್ಲಿ ನೂರಾರು ಎಕರೆ ಭತ್ತ ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು ಭಾರಿ ನಷ್ಟ ಸಂಭವಿಸಿದೆ. ರೈತರಿಗೆ ಹಾನಿಯಾದ ಬಗ್ಗೆ ತಕ್ಷಣವೇ ಸರ್ಕಾರಕ್ಕೆ ವರದಿ ಸಲ್ಲಿಸಿ ಹಾನಿಗೊಂಡ ಬೆಳೆಗೆ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಸಾಗರ ಕ್ಷೇತ್ರದಲ್ಲಿ ಈ ಹಿಂದೆ ಸುರಿದ ಬಾರಿ ಮಳೆಯಿಂದ ನೂರಾರು ಮನೆಗಳು ಕುಸಿದು ಹಾನಿ ಸಂಭವಿಸಿತ್ತು. ಈಗ ಸುರಿದ ಮಳೆಯಿಂದ ರೈತರ ಗದ್ದೆಗಳು ಕೊಚ್ಚಿ ಹೋಗಿ ತುಂಬಾ ನಷ್ಟ ಸಂಭವಿಸಿದೆ. ತಕ್ಷಣವೇ ರೈತರು ದಾಖಲೆಯೊಂದಿಗೆ ಕಂದಾಯ ಇಲಾಖೆಗೆ ಅರ್ಜಿ ನೀಡುವಂತೆ ತಿಳಿಸಿದರು.

ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಕೃಷಿ ಅಧಿಕಾರಿ ಚಂದ್ರಕುಮಾರ್, ತೋಟಗಾರಿಕಾ ಇಲಾಖೆ ಅಧಿಕಾರಿ ಉಲ್ಲಾಸ್, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಶಿವಣ್ಣ ,ಬೆನಕೇಶ್, ಕಂದಾಯ ಅಧಿಕಾರಿಗಳಾದ ಕವಿರಾಜ್, ಕೀರ್ತಿ, ಗೋವಿಂದ್ ಮೂರ್ತಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಜೇಂದ್ರ ಯಾದವ್, ಪಿಡಿಒ ಮಂಜನಾಯಕ್ , ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಕಳಸೆ ಚಂದ್ರಪ್ಪ, ಬಗರ್ ಹುಕುಂ ಸಮಿತಿ ಸದಸ್ಯ ರವಿಕುಮಾರ್ ದಾಸ್ ಕೊಪ್ಪ, ಪಕ್ಷದ ಮುಖಂಡರಾದ ಎನ್, ಉಮೇಶ್, ರಮಾನಂದ್ ಸಾಗರ್, ರೆಹಮತ್‌ ಉಲ್ಲಾ, ಸೇರಿದಂತೆ ಪಕ್ಷದ ಅನೇಕ ಮುಖಂಡರು ಇದ್ದರು.

ಕೆರೆಯ ತೂಬು ಒಡೆದು ಭತ್ತದ ಪೈರು ನಾಶ

ಬೊಮ್ಮನಕಟ್ಟೆ ದೇಗುಲದ ಸಮೀಪ ಕೆರೆಯ ತೂಬು ಮತ್ತು ಪೈಪ್‌ ಒಡೆದು ಹಾನಿ ಉಂಟಾಗಿದೆ. ಈಗಾಗಲೇ ಕೆರೆ ಭರ್ತಿಯಾಗಿತ್ತು. ಸೋಮವಾರ ಸುರಿದ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ತೂಬು ಮತ್ತು ಪೈಪ್‌ ಒಡೆದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈಚೆಗೆ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಸ್ಥಳಕ್ಕೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್‌, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್‌ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಸ್ಥಳೀಯರಿಗೆ ಧೈರ್ಯ ಹೇಳಿದರು.