ಪ್ರಿಯತಮೆಗೆ ಮೆಸೇಜ್ ಮಾಡಿದಸ್ನೇಹಿತನ ರೈಲಿಗೆ ತಳ್ಳಿ ಕೊಂದ

| Published : Sep 09 2025, 02:00 AM IST

ಪ್ರಿಯತಮೆಗೆ ಮೆಸೇಜ್ ಮಾಡಿದಸ್ನೇಹಿತನ ರೈಲಿಗೆ ತಳ್ಳಿ ಕೊಂದ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ ಎಂದು ಕಾರಣಕ್ಕೆ ಕೋಪಗೊಂಡು ಚಲಿಸುವ ರೈಲಿಗೆ ಸ್ನೇಹಿತನನ್ನು ತಳ್ಳಿ ಕೊಲೆ ಮಾಡಿದ ಆರೋಪದ ಮೇರೆಗೆ ಸರಕು ಸಾಗಾಣಿಕೆ ಆಟೋ ಚಾಲಕನೊಬ್ಬನನ್ನು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ ಎಂದು ಕಾರಣಕ್ಕೆ ಕೋಪಗೊಂಡು ಚಲಿಸುವ ರೈಲಿಗೆ ಸ್ನೇಹಿತನನ್ನು ತಳ್ಳಿ ಕೊಲೆ ಮಾಡಿದ ಆರೋಪದ ಮೇರೆಗೆ ಸರಕು ಸಾಗಾಣಿಕೆ ಆಟೋ ಚಾಲಕನೊಬ್ಬನನ್ನು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹದೇವಪುರ ಸಮೀಪದ ನಿವಾಸಿ ಇಸ್ಮಾಯಿಲ್ (25) ಮೃತ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ಪುನೀತ್‌ ಬಂಧನವಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರತಾಪ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದೊಡ್ಡ ನೆಕ್ಕುಂದಿ ರೈಲ್ವೆ ಹಳಿಗಳ ಬಳಿ ಸ್ನೇಹಿತರ ಮಧ್ಯೆ ಭಾನುವಾರ ರಾತ್ರಿ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ವಿಜಯಪುರದ ಇಸ್ಮಾಯಿಲ್‌, ಚಿತ್ರದುರ್ಗದ ಪುನೀತ್ ಹಾಗೂ ಪ್ರತಾಪ್ ಗೂಡ್ಸ್ ಆಟೋ ಚಾಲಕರಾಗಿದ್ದು, ಮಹದೇವಪುರ ಸಮೀಪದ ಪಿಜಿಯಲ್ಲಿ ಅವರು ಒಟ್ಟಿಗೆ ವಾಸವಾಗಿದ್ದರು. ಹಲವು ದಿನಗಳಿಂದ ಯುವತಿ ಜತೆ ಪುನೀತ್‌ಗೆ ಪ್ರೇಮವಿತ್ತು. ತನ್ನ ಪ್ರಿಯತಮೆಯನ್ನು ಸ್ನೇಹಿತ ಇಸ್ಮಾಯಿಲ್‌ಗೆ ಸಹ ಆತ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆ ಜತೆ ಇಸ್ಮಾಯಿಲ್ ಚಾಟಿಂಗ್ ಶುರು ಮಾಡಿದ್ದ. ಈ ಸಂಗತಿ ತಿಳಿದು ಕೆರಳಿದ ಪುನೀತ್‌, ತನ್ನ ಪ್ರೇಮದ ವಿಚಾರಕ್ಕೆ ಬಾರದಂತೆ ತಾಕೀತು ಮಾಡಿದ್ದ. ಆದಾಗ್ಯೂ ವಾಟ್ಸಾಪ್‌ನಲ್ಲಿ ಚಾಟಿಂಗ್‌ ಹಾಗೂ ಮಾತುಕತೆಯನ್ನು ಇಸ್ಮಾಯಿಲ್ ಮುಂದುವರೆಸಿದ್ದ. ಈ ವಿಷಯವಾಗಿ ಗೆಳೆಯರು ಪರಸ್ಪರ ಕತ್ತಿ ಮಸೆಯುತ್ತಿದ್ದರು.

ಅಂತೆಯೇ ಭಾನುವಾರ ರಾತ್ರಿ ದೊಡ್ಡ ನೆಕ್ಕುಂದಿ ರೈಲ್ವೆ ಹಳಿಗಳ ಬಳಿಗೆ ಮಾತುಕತೆ ನೆಪದಲ್ಲಿ ಪುನೀತ್‌ನನ್ನು ಇಸ್ಮಾಯಿಲ್ ಕರೆದಿದ್ದ. ಆಗ ಆತನ ಜತೆ ಪ್ರತಾಪ್ ಸಹ ತೆರಳಿದ್ದ. ಈ ಭೇಟಿ ವೇಳೆ ಪ್ರೇಮದ ವಿಚಾರ ಪ್ರಸ್ತಾಪವಾಗಿ ಇಸ್ಮಾಯಿಲ್ ಮೇಲೆ ಪುನೀತ್ ಗಲಾಟೆ ಮಾಡಿದ್ದಾನೆ. ಆಗ ತಳ್ಳಾಟ ನಡೆದು ಕೊನೆಗೆ ರೈಲು ಬರುವ ವೇಳೆಗೆ ಇಸ್ಮಾಯಿಲ್‌ನನ್ನು ಜೋರಾಗಿ ಆರೋಪಿಗಳು ತಳ್ಳಿದ್ದಾರೆ. ಈ ಹಂತದಲ್ಲಿ ಚಲಿಸುವ ರೈಲಿಗೆ ಸಿಲುಕಿ ಇಸ್ಮಾಯಿಲ್ ಮೃತಪಟ್ಟಿದ್ದಾನೆ.

ರೀಲ್ಸ್ ಕತೆ ಕಟ್ಟಿದ ಆರೋಪಿ:

ಈ ಹತ್ಯೆ ಬಳಿಕ ರೈಲು ಹಳಿಗಳ ಬಳಿ ರೀಲ್ಸ್ ಮಾಡೋದಕ್ಕೆ ಹೋಗಿ ರೈಲಿಗೆ ಸಿಲುಕಿ ಇಸ್ಮಾಯಿಲ್ ಮೃತಪಟ್ಟಿದ್ದಾನೆ ಎಂದು ಪುನೀತ್ ಸುಳ್ಳಿನ ಕತೆ ಕಟ್ಟಿದ್ದ. ಆದರೆ, ಈತನ ನಡವಳಿಕೆ ಮೇಲೆ ಶಂಕೆಗೊಂಡ ಪೊಲೀಸರು, ಕೂಡಲೇ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.