ಸೋಮವಾರಪೇಟೆ ಜಲಾಲಿಯ ಮಸೀದಿ ವತಿಯಿಂದ ಸೌಹಾರ್ದ ಸಮ್ಮೇಳನ

| Published : Sep 21 2024, 01:51 AM IST

ಸಾರಾಂಶ

ಮಸೀದಿ, ದೇವಸ್ಥಾನ ಅಥವಾ ಚರ್ಚುಗಳಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ. ಜಲಾಲಿಯ ಮಸೀದಿ ವತಿಯಿಂದ ಮಸೀದಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮಸೀದಿ, ದೇವಸ್ಥಾನ ಅಥವಾ ಚರ್ಚುಗಳಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.

ಇಲ್ಲಿನ ಜಲಾಲಿಯ ಮಸೀದಿ ವತಿಯಿಂದ ಮಸೀದಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆರಾಧನಾಲಯಗಳು ಮನುಷ್ಯರ ನಡುವೆ ಉತ್ತಮ ಸಂಬಂಧ ಬೆಸೆಯುವ ಕೆಲಸ ಮಾಡಿದರೆ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ ಎಂದರು.

ಧರ್ಮಗುರು ಮೌಲಾನ ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಮಾತನಾಡಿ, ಪ್ರವಾದಿ ಮಹಮ್ಮದ್‌ ಕಾಲದಲ್ಲಿಯೂ ಮಸೀದಿ ಜ್ಞಾನದ ಕೇಂದ್ರವಾಗಿತ್ತು. ಇಂದಿಗೂ ಅವರ ಸಂದೇಶಗಳು ಸಾರ್ವಕಾಲಿಕವಾದದು. ಮಕ್ಕಳಿಗೆ ಮಹಾನ್ ಸಂತರ ಸಂದೇಶಗಳನ್ನು ತಿಳಿಹೇಳುವ ಕೆಲಸ ಆಗಬೇಕಾಗಿದೆ ಎಂದರು.

ಭಗವಂತನ ಜೊತೆ ಅನುಸಂಧಾನ ಮಾಡುವುದೇ ಎಲ್ಲಾ ಧರ್ಮಗಳ ಸಾರವಾಗಿದೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಎಲ್ಲಾ ಹಬ್ಬದ ಆಚರಣೆಗಳು ಎಲ್ಲಾ ಧರ್ಮದವರನ್ನು ಸೇರಿಸಿ ಆಚರಿಸುತ್ತಾರೆ. ಜಿಲ್ಲೆಯ ಜನರ ನೈಜ ಭಾವನೆಗಳನ್ನು ಅರಿತುಕೊಂಡು ಪ್ರೀತಿ ವಿಶ್ವಾಸದಿಂದ ಬದುಕಲು ಇಂತಹ ಆಚರಣೆಗಳು ಅವಶ್ಯವಾಗಿದೆ ಎಂದು ಸೇಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ವಂ. ಗುರು ಪ್ರಾನ್ಸಿಸ್ ಚೆರಕ್ಕಲ್ ಹೇಳಿದರು.

ಸೋಮವಾರಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎ.ಆದಂ ಅವರನ್ನು ಸನ್ಮಾನಿಸಲಾಯಿತು.

ಜಲಾಲಿಯ ಮಸೀದಿ ಅಧ್ಯಕ್ಷ ಎಂ.ಬಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ಸಮದ್, ಕರೀಂ, ಆಲಿ ಸಖಾಫಿ, ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಬಜೆಗುಂಡಿ ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ. ಯಾಕೂಬ್, ಕಾಗಡಿಕಟ್ಟೆ ಮಸೀದಿ ಅಧ್ಯಕ್ಷ ಮಹಮ್ಮದ್, ಉಸ್ತಾದ್ ಮುನೀರ್ ಸಅದಿ ಮತ್ತಿತರರು ಇದ್ದರು.