ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹೆಣ್ಣುಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ರೂಪಿಸಿರುವ ಆಪ್ತಗೆಳತಿ ಕಾರ್ಯಕ್ರಮ ಮಹಿಳೆಯರು, ಮಕ್ಕಳಿಗೆ ನೀಡಿರುವ ಹಕ್ಕು, ಆಶಯಗಳಿಗೆ ಪೂರಕವಾಗಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ವಿನೂತನ ‘ಆಪ್ತಗೆಳತಿ ನಿಮ್ಮ ಬಳಿಗೆ’ ಕಾರ್ಯಕ್ರಮ ಉದ್ಘಾಟಿಸಿ, ಆಪ್ತಗೆಳತಿ ಕಿರುಪೆಟ್ಟಿಗೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಆಪ್ತಗೆಳತಿ-ನಿಮ್ಮ ಬಳಿಗೆ ಪ್ರತಿಯೊಬ್ಬರ ಕಣ್ಣು ತೆರೆಸುವ ಕಾರ್ಯಕ್ರಮವಾಗಿದೆ. ಶತಶತಮಾನಗಳಿಂದಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಂವಿಧಾನ ಜಾರಿ ಬಳಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿದ್ದು, ಹೆಣ್ಣುಮಕ್ಕಳು ಶೈಕ್ಷಣಿಕ, ಅರ್ಥಿಕವಾಗಿ ಮುನ್ನಡೆದು ಸಬಲರಾಗುತ್ತಿದ್ದಾರೆ. ಇದಕ್ಕೆ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳೆಯರು, ಮಕ್ಕಳಿಗೆ ನೀಡಿರುವ ಹಕ್ಕುಗಳೇ ಕಾರಣವಾಗಿವೆ ಎಂದು ಹೇಳಿದರು.ಇಂದು ಮಹಿಳೆ, ಪುರುಷರೆನ್ನದೇ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ದೌರ್ಜನ್ಯ ನಡೆದಾಗ ಮುಗ್ದ ಹೆಣ್ಣುಮಕ್ಕಳು ಹೇಳಿಕೊಳ್ಳಲು ಸಾಕಷ್ಟು ಮುಜುಗರ, ಯಾತನೆ ಅನುಭವಿಸುತ್ತಾರೆ. ಹೆಣ್ಣು ತಾಯಿಯಾಗಿ ಹೆಂಡತಿ, ಮಗಳು, ಅಕ್ಕ, ತಂಗಿಯಾಗಿ ನಮ್ಮನ್ನು ಆವರಿಸಿದ್ದಾರೆ ಎಂದು ತಿಳಿಸಿದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಆಪ್ತಗೆಳತಿ ಕಾರ್ಯಕ್ರಮ ಮಹಿಳೆಯರ ರಕ್ಷಣೆಗಾಗಿ ಕಲ್ಪಿಸಿರುವ ಉತ್ತಮ ಅವಕಾಶವಾಗಿದೆ. ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೊಳಿಸುವುದರಿಂದ ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳು ಕಲಿಯಲು ಒಳ್ಳೆಯ ಪರಿಸರ ನಿರ್ಮಾಣವಾಗಲಿದೆ. ಕಲಿಕಾ ಪ್ರಕ್ರಿಯೆ ವೃದ್ಧಿಸಲಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಇದೊಂದು ಅರ್ಥಪೂರ್ಣ ಹಾಗೂ ಅತ್ಯದ್ಭುತ ಕಾರ್ಯಕ್ರಮವಾಗಿದೆ. ಮಹಿಳೆಯರು ಅದರಲ್ಲೂ ಚಿಕ್ಕಮಕ್ಕಳ ಮೇಲೆಯೂ ದೌರ್ಜನ್ಯ ಪ್ರಕ್ರಣಗಳು ದಾಖಲಾಗುತ್ತಿವೆ. ದೌರ್ಜನ್ಯ ಶಾಲೆಯಲ್ಲಿ, ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಎಲ್ಲಿಯಾದರೂ ನಡೆಯಬಹುದು. ಆದರೆ ಪೊಲೀಸ್ ಠಾಣೆಗೆ ದೂರು ನೀಡಲು ಕೆಲವರು ಮುಂದೆ ಬರುವುದಿಲ್ಲ. ಇದನ್ನು ಮನಗಂಡು ಆಪ್ತಗೆಳತಿ ಕಾರ್ಯಕ್ರಮ ರೂಪಿತವಾಗಿದ್ದು, ಮಹಿಳಾ ಸುರಕ್ಷತೆಗೆ ಲ್ಯಾಂಡ್‌ಮಾರ್ಕ್ ದೊರೆತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಜೀವಜಗತ್ತಿನ ಕೇಂದ್ರ ಬಿಂದುವಾಗಿರುವ ಹೆಣ್ಣುಮಕ್ಕಳು ಹಲವು ಸಂಕೋಲೆ, ಸಂಕಷ್ಟಗಳಿಂದ ಹೊರಬರಲೂ ಇನ್ನೂ ಸಾಧ್ಯವಾಗಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರಾದಿಯಾಗಿ ಮಹಿಳೆಯರು ದೌರ್ಜನ್ಯಕ್ಕೀಡಾಗುತ್ತಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆಗಾಗಿ ಕಿರು ದೂರುಪೆಟ್ಟಿಗೆಯನ್ನು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಅಳವಡಿಸಲಾಗುತ್ತಿದೆ ಎಂದು ಹೇಳಿದರು.ಕಿರುಪಟ್ಟಿಗೆ ಮೂಲಕ ದೂರು ನೀಡುವ ಮಕ್ಕಳ ಹೆಸರನ್ನು ಗೌಪ್ಯವಾಗಿಡಲಾಗುವುದು. ಆಯಾ ಭಾಗದ ಬೀಟ್ ಪೋಲಿಸ್ ಕಾನ್‌ಸ್ಟೇಬಲ್‌ಗಳು ಪ್ರತಿ ಶನಿವಾರ ಕಿರುಪೆಟ್ಟಿಗೆ ತೆರೆದು ದೂರುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಲ್ಲಿಸಲಿದ್ದಾರೆ. ಆ ಮೂಲಕ ಮಕ್ಕಳ ರಕ್ಷಣೆಗೆ ಕ್ರಮ ವಹಿಸಲಾಗಿದೆ. ಕಾರ್ಯಕ್ರಮದ ಮೊದಲ ಭಾಗವಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಿರುಪೆಟ್ಟಿಗೆ ಅಳವಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿನಿಲಯಗಳು, ರೈಲ್ವೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಅಳವಡಿಸಲು ಇಲಾಖೆ ಮುಂದಾಗಿದೆ ಎಂದರು.
ಇದೇ ವೇಳೆ ಜಿಲ್ಲೆಯ ವಿವಿಧ ಶಾಲಾ ಕಾಲೇಜು ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರಿಗೆ ಆಪ್ತಗೆಳತಿ ಕಿರು ದೂರು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ವಿತರಿಸಲಾಯಿತು.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ.ಲಕ್ಷ್ಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಡಿವೈಎಸ್ಪಿ ಲಕ್ಷ್ಮಯ್ಯ ಇದ್ದರು.