ಕರ್ನಾಟಕ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 17ರಿಂದ ರಾಜ್ಯಮಟ್ಟದ ಪಶು, ಕುಕ್ಕುಟ, ಮತ್ಸ್ಯ ಮೇಳ

| Published : Jan 14 2025, 01:04 AM IST / Updated: Jan 14 2025, 12:55 PM IST

ಕರ್ನಾಟಕ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 17ರಿಂದ ರಾಜ್ಯಮಟ್ಟದ ಪಶು, ಕುಕ್ಕುಟ, ಮತ್ಸ್ಯ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ರೀತಿಯಲ್ಲಿ ಪಶುಪಾಲನೆ ಹಾಗೂ ರೈತರಿಗೆ ಸರ್ಕಾರದ ಯೋಜನೆಗಳು ಸೇರಿದಂತೆ ಇನ್ನಿತರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 17ರಿಂದ 19ರ ವರೆಗೆ ಮೂರು ದಿನಗಳ ವರೆಗೆ ಜಾನುವಾರು, ಕುಕ್ಕಟ ಹಾಗೂ ಮತ್ಸ್ಯ ಮೇಳ ಆಯೋಜಿಸಲಾಗಿದೆ

  ಬೀದರ್‌ : ಆಧುನಿಕ ರೀತಿಯಲ್ಲಿ ಪಶುಪಾಲನೆ ಹಾಗೂ ರೈತರಿಗೆ ಸರ್ಕಾರದ ಯೋಜನೆಗಳು ಸೇರಿದಂತೆ ಇನ್ನಿತರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ 17ರಿಂದ 19ರ ವರೆಗೆ ಮೂರು ದಿನಗಳ ವರೆಗೆ ಜಾನುವಾರು, ಕುಕ್ಕಟ ಹಾಗೂ ಮತ್ಸ್ಯ ಮೇಳ ಆಯೋಜಿಸಲಾಗಿದೆ ಎಂದು ಪಶು ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ.ಸಿ ವೀರಣ್ಣ ಮಾಹಿತಿ ನೀಡಿದರು.

ಅವರು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ವಿದ್ಯಾಲಯದ ಸ್ಥಾಪನೆಯ 20ನೇ ವರ್ಷಾಚರಣೆ ಪ್ರಯುಕ್ತ ರಾಜ್ಯಮಟ್ಟದ ಪಶು, ಕುಕ್ಕಟು ಮತ್ತು ಮತ್ಸ್ಯ ಮೇಳ ಆಯೋಜಿಸಿದ್ದು, ವಿವಿಧ ಇಲಾಖೆಗಳಾದ ಕೃಷಿ, ರೇಷ್ಮೆ ತೋಟಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆಗಳು ಭಾಗವಹಿಸುತ್ತಿವೆ. ಮೇಳದಲ್ಲಿ ರಾಜ್ಯದ 31 ಜಿಲ್ಲೆಯಿಂದ ಶ್ರೇಷ್ಠ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ಪ್ರದಾನ ಕೂಡ ಮಾಡಲಾಗುವುದು ಎಂದು ತಿಳಿಸಿದರು.

ಈ ಮೇಳವು ರಾಜ್ಯದ ಸಮಸ್ತ ರೈತರಿಗೆ, ಪಶು ಹಾಗೂ ಮೀನುಗಾರಿಕೆ ಸಾಕಾಣಿಕೆಯಲ್ಲಿ ಆಸಕ್ತಿಯುಳ್ಳ ಯುವಜನರಿಗೆ ವಿವಿಧ ತಳಿಗಳು, ಇತ್ತೀಚೆಗೆ ಮೂಡಿ ಬಂದ ಹೊಸ ತಂತ್ರಜ್ಞಾನಗಳು, ಸಾಕಾಣಿಕ ಪದ್ಧತಿಗಳು ಹಾಗೂ ಇತರ ಅವಿಷ್ಕಾರಗಳನ್ನು ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶ ಎಂದರು.

ಮತ್ಸ್ಯ ಮೇಳದಲ್ಲಿ 16ಕ್ಕೂ ಹೆಚ್ಚು ಸ್ಟಾಲ್‌ ಅಳವಡಿಸಲಾಗಿದ್ದು, ವಿವಿಧ ರೀತಿಯ ಮೀನು ತಳಿಗಳು ಮತ್ತು ಮಕ್ಕಳ ಆಕರ್ಷಣೆಯಾಗಿ ವಿನ್ಯಾಸಗೊಳಿಸಲಾಗುತ್ತದೆ. ಮೇಳದಲ್ಲಿ 20ಕ್ಕು ಹೆಚ್ಚು ದೇಶದೆಲ್ಲೆಡೆಯ ಹಸು, ಎಮ್ಮೆ, ಆಡು ಹಾಗೂ ಕುರಿ ತಳಿಗಳನ್ನು ಪ್ರದರ್ಶಿಸಲಾಗುತ್ತಿದೆ. ಎಮ್ಮೆ ತಳಿಯಲ್ಲಿ ಮುರ‍್ರಾ, ಪಂಡ್ರಾಪುರಿ, ಸುರ್ತಿ ಮುಂತಾದ ತಳಿಗಳು, ಕುರಿ ಮತ್ತು ಮೇಕೆಯಲ್ಲಿ ಬಿದರಿ, ಉಸ್ಮಾನಾಬಾದಿ, ಸಿರೋಹಿ, ಬಾರ್ಬರಿ, ಕೆಂಗೂರಿ ಹೀಗೆ ಮುಂತಾದ ತಳಿಗಳು ಮೇಳದ ವಿಶೇಷ ಆಕರ್ಷಣೆಯಾಗಿವೆ. ಮೇಳದ ಪ್ರದರ್ಶನದಲ್ಲಿ ಕುಕ್ಕುಟ ಪ್ರದರ್ಶನವೂ ವಿಶೇಷ ಅಂಗವಾಗಿದ್ದು, ಈ ಕುಕ್ಕುಟ ಪ್ರಪಂಚದಲ್ಲಿ ನಮ್ಮದೇ ವಿಶ್ವವಿದ್ಯಾಲಯದಲ್ಲಿ ತಯಾರಿಸಲ್ಪಟ್ಟ ಸುಧಾರಿತ ತಳಿಗಳಾದ ಗಿರಿರಾಜ, ಸ್ವರ್ಣಧಾರ, ರಾಜ-2 ಹಾಗೂ ನಾಟಿ ಕೋಳಿಗಳನ್ನು ಪ್ರದರ್ಶಿಸಲಾಗುತ್ತದೆ.

ಪಶು ಮೇಳದಲ್ಲಿ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನವು ಶಾಂತಿ ಮತ್ತು ಸಮಾನತೆ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗುತ್ತಿದೆ. ಬುದ್ಧ ಭಗವಾನರ ಮೂರ್ತಿಯನ್ನು ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಕುವೆಂಪು, ಬಸವಣ್ಣ, ಮತ್ತು ಬಸವೇಶ್ವರರ ಭಾವಚಿತ್ರಗಳನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿದೆ ಎಂದರು.

ಮೇಳದ ಕೊನೆಯ ದಿನದಂದು ಶ್ವಾನ ಪ್ರದರ್ಶನ ಆಯೋಜಿಸಲಾಗುತ್ತಿದೆ. 15 ವಿವಿಧ ತಳಿಗಳ 200 ಶ್ವಾನಗಳು ಇದರಲ್ಲಿ ಭಾಗವಹಿಸಲಿವೆ.

ಈ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಕೂಡ ಒಂದು ವಿಶೇಷ ಆಚರಣೆ. ವಿವಿಧ ಕಲಾತಂಡಗಳಿಂದ ಸುಗಮ ಸಂಗೀತ, ಭರತನಾಟ್ಯ, ಹಾಡುಗಳು, ಡೊಳ್ಳು ಕುಣಿತ, ಕಂಸಾಳೆ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ಮೇಳವು ಪಶುಸಂಗೋಪನೆ, ಮೀನು ಸಾಕಾಣೆಗೆ ಹಾಗೂ ಕೋಳಿ ಸಾಕಾಣಿಕೆ ಬಗ್ಗೆ ತಿಳಿದುಕೊಳ್ಳಲು ರಾಜ್ಯದ ರೈತರಿಗೆ, ಯುವಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಒಂದು ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮೇಳದ ಲಾಭ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಬಸವರಾಜ ಭತ್ಮುರ್ಗೆ, ಕುಲಸಚಿವರಾದ ಪಿಟಿ ರಮೇಶ, ಡಾ. ದಿಲೀಪಕುಮಾರ, ಡಾ. ಶಿವಪ್ರಕಾಶ, ಡಾ. ಎಂಕೆ ತಾಂದಳೆ, ಡಾ. ಚನ್ನಪ್ಪಗೌಡ ಮತ್ತಿತರ ಅಧಿಕಾರಿಗಳು ಇದ್ದರು.