ಸಾರಾಂಶ
ಕೋಟದ ಶ್ರೀ ಹಂದೆ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ತನ್ನ ಸುವರ್ಣ ಪರ್ವದ 9ನೇ ಕಾರ್ಯಕ್ರಮವಾಗಿ ಹಮ್ಮಿಕೊಂಡ ಆಹ್ವಾನಿತ ಯಕ್ಷಗಾನ ತಂಡಗಳ ಎರಡು ದಿನಗಳ ಯಕ್ಷೋತ್ಸವ ‘ಯಕ್ಷ ತ್ರಿವಳಿ’ ಮಕ್ಕಳ ಯಕ್ಷಗಾನ ಪ್ರದರ್ಶನ ಸಮಾರೋಪ ನಡೆಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಕಲೆಯನ್ನು ನಂಬಿಕೊoಡವನನ್ನು ಕಲೆ ಎಂದೂ ಕೈ ಬಿಡದು. ಮಕ್ಕಳಿಗೆ ಯಕ್ಷಗಾನ ಕಲಿಸಿದರೆ ಭವಿಷ್ಯದಲ್ಲಿ ಉತ್ತಮ ಕಲಾವಿದನಾಗಿಯೋ ಅಥವಾ ಪ್ರೇಕ್ಷಕನಾಗಿಯೋ ಕಲೆಯ ಬೆಳವಣಿಗೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳ ಮೇಳಗಳಿಗೆ ಅಕಾಡೆಮಿ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಶುಕ್ರವಾರ ಕೋಟದ ಶ್ರೀ ಹಂದೆ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ತನ್ನ ಸುವರ್ಣ ಪರ್ವದ 9ನೇ ಕಾರ್ಯಕ್ರಮವಾಗಿ ಹಮ್ಮಿಕೊಂಡ ಆಹ್ವಾನಿತ ಯಕ್ಷಗಾನ ತಂಡಗಳ ಎರಡು ದಿನಗಳ ಯಕ್ಷೋತ್ಸವ ‘ಯಕ್ಷ ತ್ರಿವಳಿ’ ಮಕ್ಕಳ ಯಕ್ಷಗಾನ ಪ್ರದರ್ಶನದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಇಲಾಖೆಯ ಅನುದಾನದಲ್ಲಿ ಬಹುಪಾಲನ್ನು ಯಕ್ಷಗಾನಕ್ಕೆ ನೀಡಲಾಗುತ್ತಿದೆ. ಮಕ್ಕಳಿಗೆ ಕಲಾಕೌಶಲಗಳನ್ನು ಹೆತ್ತವರು ನೀಡಬೇಕು. ಇದು ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯವನ್ನು ಒದಗಿಸುತ್ತದೆ ಎಂದರು.ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಮಾತನಾಡಿ, 50 ವರ್ಷಗಳ ಕಾಲ ಮಕ್ಕಳ ಯಕ್ಷಗಾನ ಮೇಳವನ್ನು ಕಟ್ಟಿ ಬೆಳೆಸಿ, ಅದನ್ನು ಸೂಕ್ತ ರೀತಿಯಲ್ಲಿ ನಿರ್ದೇಶಿಸಿದ ಎಚ್. ಶ್ರೀಧರ ಹಂದೆ ಅಭಿನಂದನಾರ್ಹರು ಎಂದರು.ಕಾರ್ಯಕ್ರಮದಲ್ಲಿ ಮಕ್ಕಳ ಮೇಳದ ಸವರ್ಣ ಪರ್ವದ ಗೌರವವನ್ನು ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು ನೀಡಿದ ಶ್ರೀಧರ ಹೆಬ್ಬಾರ್ ಕರ್ಜೆ ಅವರಿಗೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಯಕ್ಷಗಾನ ವಿಮರ್ಶಕ ಬೇಳೂರು ರಾಘವ ಶೆಟ್ಟಿ, ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ, ಯಕ್ಷಗುರು ಸುದರ್ಶನ ಉರಾಳ, ದೇವಳದ ಅನುವಂಶಿಕ ಮೊಕ್ತೇಸರ ಅಮರ್ ಹಂದೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಮೇಳದ ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ಸ್ವಾಗತಿಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್.ಜನಾರ್ದನ ಹಂದೆ ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಯೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ತೆಂಕುತಿಟ್ಟಿನ ಯಕ್ಷಗಾನ ‘ಶರಣ ಸೇವಾರತ್ನ’ ಪ್ರಸಂಗ ನಡೆಯಿತು.