ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಹವ್ಯಕರ ಆದರ್ಶ, ಸಂಸ್ಕೃತಿಗಳ ವಿಶೇಷತೆಗಳನ್ನು ಜಗತ್ತಿನ ತಿಳಿಸುವ ಮೂರನೇ ವಿಶ್ವ ಹವ್ಯಕ ಸಮ್ಮೇಳನ ಡಿ.೨೭ರಿಂದ ೨೯ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನಗಳೊಂದಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.ಅವರು ಬನ್ನೂರಿನ ಹವ್ಯಕ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಸಮ್ಮೇಳನದಲ್ಲಿ ಹವ್ಯಕ ಸಭಾ ಎದುರಿಸುತ್ತಿರುವ ಸವಾಲುಗಳು, ಕಷ್ಟ, ಮುಂದಿನ ದಾರಿಗಳು, ಇಂದಿನ ತನಕ ನಡೆದು ಬಂದ ದಾರಿಗಳು ಮೊದಲಾದ ೧೮ ವಿಷಯಗಳ ೮ ಗೋಷ್ಠಿಗಳ ಜೊತೆಗೆ ಹವ್ಯಕ ಸಮಾಜದ ವಿಶೇಷತೆಗಳನ್ನು ಸಮ್ಮೇಳನದಲ್ಲಿ ಜಗತ್ತಿಗೆ ಪರಿಸಲಾಗುವುದು. ಹವ್ಯಕ ಸಮುದಾಯಕ್ಕೆ ಸೀಮಿತವಾದ ಹವ್ಯಕ ಬಾಷೆಯಲ್ಲಿ ರಚನೆಯಾದ ೬೦೦೦ ಕೃತಿಗಳು ಪ್ರದರ್ಶನಗೊಳ್ಳಲಿದೆ.ಹವ್ಯಕ ಸಮುದಾಯದಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದರಿದ್ದು, ಎಲ್ಲ ಮೇಳಗಳಲ್ಲಿರುವ ಕಲಾವಿದರನ್ನು ಒಟ್ಟು ಸೇರಿಸಿ ಯಕ್ಷಗಾನ ಕಾರ್ಯಕ್ರಮ, ಭರತನಾಟ್ಯ ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡ ನಾಟ್ಯ ವೈಭವ, ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಎಲ್ಲರನ್ನು ಒಟ್ಟು ಸೇರಿಸಿ ಸಂಗೀತ ಕಾರ್ಯಕ್ರಮ, ಭಾವಗೀತ ಕಲಾವಿದರನ್ನು ಒಳಗೊಂದ ಭಾವಮೇಳ, ತಾಲ, ವಾದ್ಯಗಳ ಸಂಗೀತ ಪರಿಕರಗಳನ್ನು ಒಳಗೊಂಡಂತೆ ವಾದ್ಯ ವೈಭವ ಮೊದಲಾದ ಕಲೆಗೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳ ಸಮ್ಮಿಳನವಾಗಲಿದೆ.ಮೂಲತಃ ಯಜ್ಞ ಯಾಗಾದಿಗಳಿಂದ ಬೆಳೆದು ಬಂದಿರುವ ಹವ್ಯಕರಿಗಾಗಿ ಸಮ್ಮೇಳನದಲ್ಲಿ ಕೆಲವೊಂದು ಯಜ್ಞಗಳು, ಪೂಜೆಗಳು, ಪಾಕ ಪ್ರಾವೀಣ್ಯತೆಯನ್ನು ಹೊಂದಿರುವ ಹವ್ಯಕರಿಂದ ವಿವಿಧ ಖಾದ್ಯಗಳ ರುಚಿಯನ್ನು ಸವಿಯುವ ಪಾಕೋತ್ಸವ, ಅಡಕೆ ಕೃಷಿಯಿಂದ ಬಂದಿರುವ ಹವ್ಯಕರು ಅಡಕೆಯ ಜೊತೆಗೆ ಕಬ್ಬು ಬೆಳೆಯನ್ನು ಬೆಳೆಸುತ್ತಿದ್ದು ಸಮ್ಮೇಳನದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಾತ್ಯಕ್ಷಿಕೆ, ಯಕ್ಷಗಾನ ವೇಷಭೂಷಣಗಳ ಪ್ರದರ್ಶನ, ಗಾಯತ್ರಿ ಮಂತ್ರದ ಮಹಿಮೆ ತಿಳಿಸುವ ಥೀಮ್ ಪಾರ್ಕ್, ದೇಸೀ ಗೋತಳಿ ಪ್ರದರ್ಶನ ನಡೆಯಲಿದೆ.
೭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೮೧ ಸಾಧಕರಿಗೆ ಸನ್ಮಾನ, ೫೬೭ ಮಂದಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ಫೂರ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆರು ವರ್ಷಗಳ ಹಿಂದೆ ನಡೆದ ವಿಶ್ವ ಹವ್ಯಕ ಸಮ್ಮೇನದಲ್ಲಿ ೬೫ ಸಾವಿರ ಮಂದಿ ಭಾಗವಹಿಸಿದ್ದು ಈ ಬಾರಿಯ ಸಮ್ಮೇಳನದಲ್ಲಿ ಸುಮಾರು ೧.೫೦ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಆಗಮಿಸುವವರಿಗೆ ಊಟ, ಉಪಾಹಾರಗಳನ್ನು ಉಚಿತ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸುವ ನಿಟ್ಟಿನಲ್ಲಿ ೮೧೦ಮಂದಿ ಸಂಚಾಲಕರು, ೧೦೦೦ಕ್ಕೂ ಅಧಿಕ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗಿದೆ ಎಂದು ಡಾ.ಗಿರಿಧರ ಕಜೆ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಹವ್ಯಕ ಮಹಾ ಸಭಾದ ಮಾಜಿ ಉಪಾಧ್ಯಕ್ಷ ಬೋನಂತಾಯ ಶಿವಶಂಕರ ಭಟ್, ನಿರ್ದೇಶಕರಾದ ರಮೇಶ್ ಭಟ್ ಶರವು, ರವಿನಾರಾಯಣ ಪಟ್ಟಾಜೆ, ಈಶ್ವರ ಭಟ್, ರಾಜಗೋಪಾಲ ಉಪಸ್ಥಿತರಿದ್ದರು.