ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ದೀರ್ಘಾವಧಿ ಬೆಳೆಗೆ ಜ.12ರಿಂದ ಏ.30ರವರೆಗೆ ಕಟ್ಟು ನೀರು ಪದ್ಧತಿಯಲ್ಲಿ ನೀರು ಬಿಡುಗಡೆ ಮಾಡಲಾಗುವುದು. 18 ದಿನಗಳ ಕಾಲ ನೀರು ಹರಿಸಿ 12 ದಿನಗಳು ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ದೀರ್ಘಾವಧಿ ಬೆಳೆಗೆ ಜ.12ರಿಂದ ಏ.30ರವರೆಗೆ ಕಟ್ಟು ನೀರು ಪದ್ಧತಿಯಲ್ಲಿ ನೀರು ಬಿಡುಗಡೆ ಮಾಡಲಾಗುವುದು ಎಂದು ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಕೆ.ರಘುರಾಮನ್ ತಿಳಿಸಿದ್ದಾರೆ.

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಡಿ.30ರಂದು ನಡೆದ ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜ.12ರಿಂದ ಏ.30ರವರೆಗೆ ಕಟ್ಟು ಪದ್ಧತಿ ಆಧಾರದಲ್ಲಿ 18 ದಿನಗಳ ಕಾಲ ನೀರು ಹರಿಸಿ 12 ದಿನಗಳು ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತುರುಗನೂರು ಶಾಖಾ ನಾಲೆ, ಹೆಬ್ಬಕವಾಡಿ ಶಾಖಾ ನಾಲೆ, ನಿಡಘಟ್ಟ ಶಾಖಾ ನಾಲೆ ಮತ್ತು ಸಂಪರ್ಕ ನಾಲೆಗಳನ್ನು ಹೊರತುಪಡಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದುನಿಂತಿರುವ ದೀರ್ಘಾವಧಿ ಬೆಳೆಗೆ ನೀರು ಹರಿಸಲಾಗುವುದು.

ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಮಿತವಾಗಿ ಉಪಯೋಗಿಸಬೇಕು. ಯಾವುದೇ ಹೊಸ ಬೆಳೆಗಳನ್ನು ಬೆಳೆದು ನೀರಿನ ಕೊರತೆಯಿಂದ ಹಾನಿಯಾದಲ್ಲಿ ಅದಕ್ಕೆ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ವಿಶ್ವೇಶ್ವರಯ್ಯ ನಾಲಾ ಜಾಲದ ಮುಖ್ಯ ನಾಲೆ, ಶಾಖಾ ನಾಲೆಗಳಲ್ಲಿ ಮಾತ್ರ 18 ದಿನಗಳ ಕಾಲ ನೀರನ್ನು ಹರಿಸಿ ವಿತರಣಾ ನಾಲೆ ಮತ್ತು ಉಪ ನಾಲೆಗಳಲ್ಲಿ ನಿಗಧಿತ ಅವಧಿಗೆ ಹಾಗೂ ಅವಶ್ಯಕತೆಗೆ ತಕ್ಕಂತೆ ನೀರನ್ನು ಹರಿಸಲಾಗುವುದು.

ನಾಲ್ಕು ಕಟ್ಟು ನೀರು ಹರಿಸಿದ ನಂತರವೂ ದೀರ್ಘಾವಧಿ ಬೆಳೆಗಳಿಗೆ ನೀರಿನ ಅವಶ್ಯಕತೆ ಕಂಡುಬಂದಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆಯನ್ನು ಆಧರಿಸಿ ಮತ್ತೊಮ್ಮೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆ.ಆರ್.ಎಸ್. ವ್ಯಾಪ್ತಿಯ ವಿ.ಸಿ. ನಾಲೆಗಳಲ್ಲಿ ನೀರು ಹರಿಸುವ ದಿನಾಂಕ ಮತ್ತು ಅವಧಿ

ಜ.12ರಿಂದ 30ರವರೆಗೆ 18 ದಿನಗಳು

ಫೆ.11ರಿಂದ ಮಾ.1ರವರೆಗೆ 18 ದಿನಗಳು

ಮಾ.13ರಿಂದ ಮಾ.31ರವರೆಗೆ 18 ದಿನಗಳು

ಏ.12ರಿಂದ ಏ.30ರವರೆಗೆ 18 ದಿನಗಳು.ಕಿರಣ್ ಕುಮಾರ್‌ಗೆ ಪಿಎಚ್.ಡಿ ಪದವಿ

ಪಾಂಡವಪುರ: ಬಿ.ಎನ್.ಯಶೋಧ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಪಾಂಡವಪುರದ ಎಲ್.ಕಿರಣ್ ಕುಮಾರ್ ಅವರು ಸಾದರಪಡಿಸಿದ ‘ಕರ್ನಾಟಕದಲ್ಲಿ ಸಹಕಾರಿ ಮತ್ತು ಖಾಸಗಿ ವಲಯದ ಸಕ್ಕರೆ ಕಾರ್ಖಾನೆಗಳ ನಿರ್ವಹಣೆ: ವಿಶೇಷವಾಗಿ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಅಧ್ಯಯನ’ ಎಂಬ ಮಹಾಪ್ರಬಂಧವನ್ನು ರಾಜ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಾಗರಪಡಿಸಲಾಗಿದೆ. ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿದ ಈ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್.ಕಿರಣ್ ಕುಮಾರ್ ಅವರು ಪ್ರಸ್ತುತ ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಮಹಾರಾಜ ಶಿಕ್ಷಣ ಸಂಸ್ಥೆ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿಗಳು, ಕುಟುಂಬ ವರ್ಗದವರು ಹಾಗೂ ಮಾರ್ಗದರ್ಶಕರು ಅಭಿನಂದಿಸಿದ್ದಾರೆ.