ಸಾರಾಂಶ
ಬ್ಯಾಡಗಿ: ಮುಂಬರುವ ನ. 13ರಿಂದ 24ರ ವರೆಗೆ ಹನ್ನೆರಡು ದಿನಗಳ ಕಾಲ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳಿಂದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪ್ರವಚನ ಕಾರ‍್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪ್ರವಚನ ಕಾರ್ಯಕ್ರಮ ಆಯೋಜನೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕು ಹಾಗೂ ಜಿಲ್ಲೆಯ ಬಹು ದಿನಗಳ ಆಸೆ ಮುಂದಿನ ತಿಂಗಳು ನೆರವೇರಲಿದೆ. ಕಳೆದೆರಡು ವರ್ಷದಿಂದ ಪಟ್ಟಣದಲ್ಲಿ ಶ್ರೀಗಳ ಪ್ರವಚನ ಕಾರ್ಯಕ್ರಮ ನಡೆಸಲು ಸಾಕಷ್ಟು ಜನ ಭಕ್ತರು ನಿರಂತರವಾಗಿ ಪ್ರಯತ್ನ ನಡೆಸಿದ್ದರು. ಇದರ ಪ್ರತಿಫಲವಾಗಿ ಗವಿಸಿದ್ಧೇಶ್ವರ ಶ್ರೀಗಳು ಕಾರ‍್ಯಕ್ರಮಕ್ಕೆ ಬರಲು ಒಪ್ಪಿದ್ದು ಮುಂದಿನ ತಿಂಗಳು ಬ್ಯಾಡಗಿ ಜನರ ಪಾಲಿಗೆ ಅವಿಸ್ಮರಣೀಯ ತಿಂಗಳಾಗಲಿದೆ ಎಂದರು.ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ನಮ್ಮಗಳ ಪಾಲಿಗೆ ಇದೊಂದು ಸುಂದರ ಗಳಿಗೆಯಾಗಲಿದೆ. ಜೀವನದ ಜಂಜಾಟದಲ್ಲಿ ಸಿಲುಕಿ ದುಡ್ಡಿನ ಹಿಂದೆ ಬಿದ್ದಿರುವ ಮನುಷ್ಯರು ಆಧ್ಯಾತ್ಮಿಕ ಚಿಂತನೆಗಳಿಂದ ದೂರ ಉಳಿದಿದ್ದಾರೆ. ಎಲ್ಲರನ್ನು ಮತ್ತೆ ನಿಸ್ವಾರ್ಥ ಜೀವನದ ಹಾದಿಯಲ್ಲಿ ನಡೆಸಲು ಶ್ರೀಗಳ ಆಶೀರ್ವಚನ ಸಹಕಾರಿಯಾಗಲಿದೆ ಆದ್ದರಿಂದ ಪ್ರತಿಯೊಬ್ಬರು ಕರ‍್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳ ಆಶಿರ್ವಾದ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಗವಿಮಠದ ಪ್ರತಿನಿಧಿ ಸಂಗಪ್ಪ ಗಡಗಿ ಮಾತನಾಡಿ, ಕರ‍್ಯಕ್ರಮವನ್ನ ಅತ್ಯಂತ ಸರಳವಾಗಿ ಆಯೋಜನೆ ಮಾಡುವುದು ಕಡ್ಡಾಯ, ಪಟ್ಣಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಯಾವುದೇ ಬ್ಯಾನರ್ ಅಳವಡಿಕೆಗೆ ಅವಕಾಶವಿಲ್ಲ. ಅಲ್ಲದೇ ಡೊಳ್ಳು, ಬ್ಯಾಂಡ್ ಬಾಜಾ ಸೇರಿದಂತೆ ಇನ್ನಿತರ ಯಾವುದೇ ರೀತಿಯ ಪ್ರಚಾರ ಮಾಡುವಂತಿಲ್ಲ ಮತ್ತು ಶ್ರೀಗಳು ಮಾಡುವ ಪಾದಯಾತ್ರೆಯಲ್ಲಿ ಭಕ್ತರು ಪಾಲ್ಗೊಳ್ಳುವುದು ಬಿಟ್ಟರೆ ಕುಂಭ ಮೆರವಣಿಗೆ ಮಾಡುವಂತಿಲ್ಲ, ಶ್ರೀಗಳು ಬರುವ ಹಾದಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ನೀವುಗಳು ಶ್ರೀಗಳಿಗೆ ಸಲ್ಲಿಸುವ ಗೌರವವಾಗಿದೆ, ದೂರದ ಊರುಗಳಿಂದ ಬರುವ ಭಕ್ತಾಧಿಗಳಿಗೆ ಸಮಿತಿ ಸೂಚಿಸಿದ ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ನಿವೃತ್ತ ಪ್ರೊ.ಸಿ. ಶಿವಾನಂದಪ್ಪ ನಮ್ಮೆಲ್ಲರಿಗೂ ಜ್ಞಾನ ದಾಸೋಹದ ಸವಿ ಉಣ ಬಡಿಸಲು ಶ್ರೀಗಳು ಬರುತ್ತಿರುವುದು ಅತ್ಯಂತ ಖುಷಿ ವಿಚಾರವಾಗಿದೆ. ಪಟ್ಟಣದಲ್ಲಿ ಈ ಹಿಂದೆ ಸಾಕಷ್ಟು ಆಧ್ಯಾತ್ಮಿಕ ಕಾರ‍್ಯಕ್ರಮಗಳು ಜರುಗಿದ್ದು ಜನರು ಎಲ್ಲವನ್ನೂ ಯಶಸ್ವಿಗೊಳಿಸಿದ್ದಾರೆ. ಕಾರ‍್ಯಕ್ರಮವನ್ನು ಸಹ ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಗವಿಮಠದ ಕಿರಿಯ ಶಾಂತವೀರ ಶ್ರೀ ಸೇರಿದಂತೆ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನಶ್ರೀ, ಪ್ರಚಾರ ಸಮಿತಿ ಪ್ರಭು ಬಾಲಪ್ಪನವರ, ರಾಚಯ್ಯ ಓದೋಸಿಮಠ, ಕುಮಾರಗೌಡ ಪಾಟೀಲ, ಬಸವರಾಜ ಛತ್ರದ, ಲಿಂಗಯ್ಯ ಹಿರೇಮಠ, ಬಾಲಚಂದ್ರಗೌಡ ಪಾಟೀಲ, ಮುರಿಗೆಪ್ಪ ಶೆಟ್ಟರ ಸೇರಿದಂತೆ ಇನ್ನಿತರರಿದ್ದರು. ಎಂ.ಎಫ್. ಕರಿಯಣ್ಣನವರ ನಿರೂಪಿಸಿದರು.7 ಗ್ರಾಮಗಳಲ್ಲಿ ಶ್ರೀಗಳಿಂದ ಪಾದಯಾತ್ರೆಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ತಾಲೂಕಿನ 7 ಗ್ರಾಮಗಳಲ್ಲಿ 7 ದಿನಗಳ ಕಾಲ ಗವಿಸಿದ್ಧೇಶ್ವರ ಶ್ರೀಗಳು ಪಾದಯಾತ್ರೆ ಮಾಡಲಿದ್ದಾರೆ, ಪಾದಯಾತ್ರೆ ಬೆಳಿಗ್ಗೆ 6.30 ರಿಂದ ಆರಂಭವಾಗದ್ದು, ಪಟ್ಟಣದಲ್ಲಿಯೂ ಕೂಡಾ 4 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ, ಶ್ರೀಗಳ ಪ್ರವಚನ ಕಾರ್ಯಕ್ರಮ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವೆಗೆ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.