ಇನ್ಮುಂದೆ ಇ ಮ‍ಳಿಗೆ ಮೂಲಕ ವಾಣಿಜ್ಯ ಮಳಿಗೆಗಳ ನಿರ್ವಹಣೆ

| Published : Jun 27 2025, 12:49 AM IST

ಸಾರಾಂಶ

ಹಿಂದೆ ವಿಳಂಬವಾಗಿ ಬಾಡಿಗೆ ಪಾವತಿ ಮಾಡುವ ಒಬ್ಬೊಬ್ಬರಿಗೆ ಒಂದೊಂದು ದಂಡ ಹಾಕಲಾಗುತ್ತಿತ್ತು. ಈಗ ಎಲ್ಲವನ್ನೂ ಆ್ಯಪ್‌ನಲ್ಲಿ ಮೊದಲೇ ಸೇರಿಸಿರುವುದರಿಂದ ಎಷ್ಟು ದಂಡ ಕಟ್ಟಬೇಕು ಎನ್ನುವ ಕುರಿತಂತೆ ಆ್ಯಪ್‌ನಲ್ಲೇ ಮಾಹಿತಿ ದೊರೆಯಲಿದೆ. ಈ ಮ‍ಳಿಗೆ ಆ್ಯಪ್‌ನಲ್ಲಿ ಈಗಾಗಲೇ ಎಲ್ಲ ಮಳಿಗೆ, ಜಾಹೀರಾತುದಾರರ ಮಾಹಿತಿ ಸೇರಿಸಲಾಗಿದೆ.

ಮಹಮ್ಮದರಫೀಕ್ ಬೀಳಗಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಮೊದಲ ಬಾರಿ ವಾಣಿಜ್ಯ ಮಳಿಗೆಗಳ ನಿರ್ವಹಣೆಗೆ ಇ- ಮಳಿಗೆ ಮೊಬೈಲ್ ಆ್ಯಪ್ ಪರಿಚಯಿಸಲಾಗಿದ್ದು, ಇನ್ಮುಂದೆ ಸಂಸ್ಥೆ ವಾಣಿಜ್ಯ ಮಳಿಗೆಗಳ ನಿರ್ವಹಣೆ ಸುಲಭವಾಗಲಿದೆ. ಮಳಿಗೆಗಳ ಬಾಡಿಗೆ, ಜಾಹೀರಾತು ಪ್ರದರ್ಶನದ ಆದಾಯ, ಮತ್ತು ಇತರೇ ಮೂಲಗಳಿಂದ ಬರುವ ಆದಾಯದ ಕುರಿತಂತೆ ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಲಿದೆ.

ವಾಕರಸಾ ಸಂಸ್ಥೆಯ ವಿಭಾಗದಲ್ಲಿ ಒಟ್ಟು 175 ನಿಲ್ದಾಣಗಳಿದ್ದು, ಉಪಾಹಾರ ಗೃಹ, ವಾಣಿಜ್ಯ ಮಳಿಗೆಗಳು, ತೆರೆದ ಸ್ಥಳ, ಪಾರ್ಕಿಂಗ್ ವ್ಯವಸ್ಥೆ, ಬಸ್ ನಿಲ್ದಾಣಗಳಲ್ಲಿ ಮತ್ತು ಬಸ್ ಮೇಲೆ ಜಾಹೀರಾತು ಪ್ರದರ್ಶಿಸುವ ವ್ಯವಸ್ಥೆ ಸೇರಿದಂತೆ ಸರಿಸುಮಾರು 2000 ವಾಣಿಜ್ಯ ಪರವಾನಗಿದಾರರ ನಿರ್ವಹಣೆ ಮಾಡಲಾಗುತ್ತಿದೆ. ಈ ವಾಣಿಜ್ಯ ವ್ಯವಹಾರಗಳ ಮೂಲಕ ಪ್ರತಿ ತಿಂಗಳು ಸಂಸ್ಥೆಗೆ ₹4 ಕೋಟಿಗೂ ಅಧಿಕ ಆದಾಯ ಬರುತ್ತದೆ.

ಈ ಹಿಂದೆ ಜಾರಿಯಲ್ಲಿದ್ದ ಪದ್ಧತಿಯಿಂದ ನಿರ್ವಹಣೆ ಕಷ್ಟವಾಗುತ್ತಿತ್ತು. ಬಾಡಿಗೆದಾರರು ಪ್ರತಿ ತಿಂಗಳು ಬಾಡಿಗೆ ಸಂದಾಯ ಮಾಡುವುದು, ಬಾಕಿ ಉಳಿಸಿಕೊಂಡಿರುವುದು ಮತ್ತು ದಂಡ ಪಾವತಿಸದಿರುವುದು ತಿಳಿಯಲು ಬಹಳ ಕಷ್ಟವಾಗುತ್ತಿತ್ತು. ಪ್ರತಿಯೊಂದು ಡಿಪೋದಿಂದ ಈ ಕುರಿತು ಮಾಹಿತಿ ಸಂಗ್ರಹಿಸಿ, ಅದರ ವಸೂಲಿಗೆ ಕ್ರಮ ವಹಿಸಬೇಕಿತ್ತು. ಅಲ್ಲದೆ, ಯಾವ ಮಳಿಗೆ ಟೆಂಡರ್‌ ಅವಧಿ ಮುಗಿದಿದೆ ಎನ್ನುವುದೂ ತಿಳಿಯಲು ಕಷ್ಟವಾಗುತ್ತಿತ್ತು. ಬಾಡಿಗೆದಾರರು ಡಿಪೋಗಳಿಗೆ ಬಂದೇ ಹಣ ಭರಿಸಬೇಕಿತ್ತು. ಸಂಸ್ಥೆಯಲ್ಲೂ ಇದಕ್ಕೆ ಹೆಚ್ಚಿನ ಮಾನವ ಸಂಪನ್ಮೂಲ ಬೇಕಾಗುತ್ತಿತ್ತು. ಹೆಚ್ಚಿನ ಪ್ರಮಾಣದಲ್ಲಿ ನಗದು ವ್ಯವಹಾರ ನಡೆಯುತ್ತಿದ್ದರಿಂದ ಲೆಕ್ಕಪತ್ರ ನಿರ್ವಹಣೆಯಲ್ಲಿ ನಿಖರತೆಯ ಕೊರತೆ ಮತ್ತು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು.

ಹಿಂದೆ ವಿಳಂಬವಾಗಿ ಬಾಡಿಗೆ ಪಾವತಿ ಮಾಡುವ ಒಬ್ಬೊಬ್ಬರಿಗೆ ಒಂದೊಂದು ದಂಡ ಹಾಕಲಾಗುತ್ತಿತ್ತು. ಈಗ ಎಲ್ಲವನ್ನೂ ಆ್ಯಪ್‌ನಲ್ಲಿ ಮೊದಲೇ ಸೇರಿಸಿರುವುದರಿಂದ ಎಷ್ಟು ದಂಡ ಕಟ್ಟಬೇಕು ಎನ್ನುವ ಕುರಿತಂತೆ ಆ್ಯಪ್‌ನಲ್ಲೇ ಮಾಹಿತಿ ದೊರೆಯಲಿದೆ. ಈ ಮ‍ಳಿಗೆ ಆ್ಯಪ್‌ನಲ್ಲಿ ಈಗಾಗಲೇ ಎಲ್ಲ ಮಳಿಗೆ, ಜಾಹೀರಾತುದಾರರ ಮಾಹಿತಿ ಸೇರಿಸಲಾಗಿದೆ. ಇದು ಪ್ರತಿ ತಿಂಗಳು ಮಳಿಗೆಯ ಬಾಡಿಗೆಯ ಕುರಿತಂತೆ ರಸೀದಿ ಸಿದ್ಧಪಡಿಸಿ ಆಯಾ ಟೆಂಡರ್‌ದಾರರಿಗೆ ಕಳುಹಿಸುತ್ತದೆ. ಅಲ್ಲದೆ, ಬಾಕಿ ಉಳಿಸಿಕೊಂಡಿದ್ದರೆ ನೋಟಿಸ್‌ ಕೂಡ ಕಳುಹಿಸುತ್ತದೆ. ಪ್ರತಿತಿಂಗಳು 7ನೇ ತಾರೀಖಿನ ಒಳಗೆ ಹಣಪಾವತಿ ವ್ಯವಸ್ಥೆ ಅಳವಡಿಸಲಾಗಿದ್ದು, ಜುಲೈ 1ರಿಂದ ಕಾರ್ಯಾರಂಭ ಮಾಡಲಿದೆ.

ಈ ವಾಣಿಜ್ಯ ಪರವಾನಗಿ ನಿರ್ವಹಣಾ ತಂತ್ರಾಂಶ (ಸಿಎಲ್ಎಂಎಸ್-ಕಮರ್ಷಿಯಲ್ ಲೈಸೈನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ)ನಿಂದ ಕಡಿಮೆ ಮಾನವ ಶಕ್ತಿ ವಿನಿಯೋಗವಾಗಲಿದ್ದು, ಡಿಜಿಟಲ್ ವ್ಯವಹಾರಗಳಿಗೆ ಅವಕಾಶ ಒದಗಿಸಿದೆ. ಯುಪಿಐ, ಆರ್‌ಟಿಜಿಎಸ್‌ಎಸ್, ನೆಫ್ಟ್ ಆನ್‌ಲೈನ್‌ ಪೇಮಂಟ್‌ಗೆ ಅವಕಾಶ ಒದಗಿಸಲಾಗಿದ್ದು, ಕಡಿಮೆ ಸಮಯದಲ್ಲಿ ನಿಖರವಾದ ಲೆಕ್ಕಪತ್ರ ಲಭಿಸಲಿದೆ. ಸಂಸ್ಥೆಯ ಸಿಬ್ಬಂದಿ ಮತ್ತು ಪರವಾನಗಿದಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಹೊಂದಿರುವುದರಿಂದ ಅನುಕೂಲವಾಗಲಿದೆ.

ಹಿಂದಿನ ಪದ್ಧತಿಯಿಂದ ಯಾವ ಡಿಪೋದಿಂದ ಎಷ್ಟು ಹಣ ಸಂದಾಯವಾಗಿದೆ, ಎಷ್ಟು ಬಾಕಿಯಿದೆ, ಯಾರು ಯಾವ ಮಳಿಗೆ ಬಾಡಿಗೆ ಪಡೆದಿದ್ದಾರೆ ಎನ್ನುವುದನ್ನು ತಿಳಿಯುವುದು ಕಷ್ಟವಾಗುತ್ತಿತ್ತು. 9 ವಿಭಾಗ, 55 ಡಿಪೋಗಳಿಂದ ಮಾಹಿತಿ ಪಡೆಯಲು ಒಂದು ದಿನ ಬೇಕಿತ್ತು. ಇದೀಗ ಡಿಜಟಿಲೀಕರಣದಿಂದ ಸುಲಭದಿಂದ ಮಾಹಿತಿ ಲಭಿಸುತ್ತದೆ. ತಂತ್ರಾಂಶ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದರಿಂದ ಕಮರ್ಷಿಯಲ್‌ ವಿಂಗ್‌ಗೆ ಬಹಳ ಅನೂಕೂಲವಾಗಿದೆ ಎಂದು ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ ಹೇಳಿದರು.