ಸಾರಾಂಶ
ಚನ್ನರಾಯಪಟ್ಟಣ: ಇನ್ನು ಮುಂದೆ ತಾಲೂಕಿನಲ್ಲಿ ಸಾರ್ವಜನಿಕರಿಗೆ ವಾರದಲ್ಲಿ ಎರಡು ದಿನಗಳ ಕಾಲ ಸಮಸ್ಯೆ ಆಲಿಸಲು ಪ್ರವಾಸಿ ಮಂದಿರಲ್ಲಿ ಸಿಗುತ್ತೇವೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ಲಲಿತ್ ರಾಘವ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ ಮಾತನಾಡಿ, ಬೆಂಗಳೂರಿನಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದ ಕಾರಣ ತಾಲೂಕಿನ ಜನತೆಗೆ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ, ಈಗ ಪಕ್ಷ ಸದೃಢವಾಗಿದ್ದು, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಮುಂದಾಗಿದ್ದೇವೆ. ಕಾಂಗ್ರೆಸ್ ಸರ್ಕಾರ ಉತ್ತಮವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ತಾಲೂಕಿನ ಜನತೆಯ ಕುಂದು ಕೊರತೆ ಆಲಿಸಲು ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು ಬಾರಿ ತಾಲೂಕು ಪ್ರವಾಸ ನಡೆಸಿ ಜನರ ಸಮಸ್ಯೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸವನ್ನು ಮಾಡಲಾಗುತ್ತದೆ. ತಾಲೂಕಿನಲ್ಲಿ ನಮ್ಮ ತಾತ, ಮಾಜಿ ಮಂತ್ರಿ ಎಚ್. ಸಿ. ಶ್ರೀಕಂಠಯ್ಯನವರ ಕೊಡುಗೆ ಅಪಾರವಾಗಿದ್ದು, ನೀರಾವರಿ, ಕೈಗಾರಿಕೆ, ರಸ್ತೆ, ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಹಾದಿಯಲ್ಲಿ ನಾವು ಕೂಡ ಜನ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ವಿದ್ಯುತ್ ನಿಗಮದಲ್ಲಿ ಕೈಗಾರಿಕೆ ಮಾಡಲು ಜನರಿಗೆ ಸಾಕಷ್ಟು ಅವಕಾಶಗಳಿದ್ದು, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯನ್ನು ಮುಂದಿಟ್ಟುಕೊಂಡು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕೆಲಸ ಮಾಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಸಹ ಒಗ್ಗಟ್ಟಿನಿಂದ ನಡೆಯೋಣ ಎಂದು ಸಲಹೆ ನೀಡಿದರು.